ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು 10 ಪುಟಗಳ ಕರಡು ಶಾಸನ ರವಾನಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಸಾಲಗಾರರಿಗೆ ಬಲವಂತದ ಕ್ರಮಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಕರಡು ಶಾಸನ ಸಿದ್ದಪಡಿಸಿ ಕಳಿಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಸುಗ್ರೀವಾಜ್ಞೆ ಕರಡು ಪರಿಶೀಲನೆ ನಡೆಸಲಿದ್ದಾರೆ. ಸುಗ್ರೀವಾಜ್ಞೆ ಜಾರಿಗೆ ಸಿಎಂ ಸಿದ್ದರಾಮಯ್ಯಗೆ ಸಚಿವ ಸಂಪುಟ ಪರಿಮಾಧಿಕಾರ ನೀಡಿದ್ದು, ಸಿಎಂ ಸಿದ್ದರಾಮಯ್ಯ ಪರಿಶೀಲನೆ ಬಳಿಕ ರಾಜ್ಯಪಾಲರಿಗೆ ಸುಗ್ರೀವಾಜ್ಞೆ ರವಾನಿಸಲಾಗುತ್ತದೆ. ಇಂದು ಅಥವಾ ನಾಳೆ ರಾಜ್ಯಪಾಲರ ಅಂಕಿತ ಸಿಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಕಿರುಕುಳ ನೀಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ವರೆಗೆ ದಂಡ ವಿಧಿಸುವ ಮತ್ತು ಲೈಸೆನ್ಸ್ ರದ್ದುಗೊಳಿಸುವ, ಸಾಲ ನೀಡುವಾಗ ಯಾವುದೇ ಅಡಮಾನ ಪಡೆಯಬಾರದು. ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರ ಣವೆಂದು ಪರಿಗಣಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025’ ಕರಡು ಸಿದ್ದಗೊಂಡಿದೆ.
ಕರಡು ಸುಗ್ರೀವಾಜ್ಞೆಯಲ್ಲಿ ಏನೇನಿದೆ?
ಸಾಲ ವಸೂಲಿ ಹೆಸರಲ್ಲಿ ಸಾಲಗಾರರಿಗೆ ಹಿಂದೆ, ಹಲ್ಲೆ, ಅವಮಾನ ಮಾಡುವಂತಿಲ್ಲ
ಸಾಲಗಾರರ ದೈನಂದಿನ ಕೆಲಸಗಳಿಗೆ ತೊಂದರೆ ಉಂಟು ಮಾಡಿದರೆ ಲೈಸೆನ್ಸ್ ರದ್ದು
ಗ್ರಾಹಕರಿಂದ ಸ್ವೀಕರಿಸಲಾದ ಹಣಕ್ಕೆ ಸಹಿ ಮಾಡಲಾದ ರಶೀದಿಯನ್ನು ನೀಡಬೇಕು
ಸಾಲ ಪಡೆದವರು ಬಡ್ಡಿ, ಕಂತು ಪಾವತಿ ವಿವರ ಕೇಳಿದರೆ ಸಂಸ್ಥೆಗಳು ಕೊಡಬೇಕು
ಮೈಕ್ರೋ ಫೈನಾನ್ಸ್ಗಳು ಕಡ್ಡಾಯವಾಗಿ ಸ್ಥಳೀಯ ಕಚೇರಿಯನ್ನು ಹೊಂದಿರಬೇಕು