ಹಾಸನ: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲಾ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ, ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದಿಂದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು.
ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಾನು ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು. 2011ರಲ್ಲಿ ಸಿದ್ದರಾಮಯ್ಯ ಅವರ ಸರಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ಪಡೆಯಲು ಅನುಮತಿ ಕೊಡುವ ಬಗ್ಗೆ ನಾನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಅದನ್ನೇ ತಿರುಚಿ ಹೇಳಿದ ಕಾಂಗ್ರೆಸ್ ನಾಯಕರು, ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ನನ್ನ ಒಳ್ಳೆಯ ಪ್ರಯತ್ನಕ್ಕೆ ವ್ಯವಸ್ಥಿತವಾಗಿ ಅಡ್ಡಿಪಡಿಸಿದರು ಎಂದು ದೂರಿದರು.
ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಏನೇನು ಷಡ್ಯಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿತು ಎಂದು ಅವರು ನೇರ ಆರೋಪ ಮಾಡಿದರಲ್ಲದೆ, ದೇವದಾರಿ ಗಣಿ ಯೋಜನೆಗೆ ರಾಜ್ಯ ಸರಕಾರ ಅಡ್ಡಿಪಡಿಸಿದ ಕಾರಣದಿಂದ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರೆಲ್ಲರೂ ನನ್ನಲ್ಲಿ ಬಂದು ದುಃಖ ತೋಡಿಕೊಂಡರು. ನನ್ನ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗೆ ಬೀಗ ಬೀಳಬಾರದು ಎಂಬ ಸದುದ್ದೇಶದಿಂದ ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ರಾಜಕೀಯ ಪ್ರತಿಷ್ಠೆಯಿಂದ ಕೈಗಾರಿಕೆಗಳ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದರೆ ನರೇಂದ್ರ ಮೋದಿ ಅವರ ಸರಕಾರ ಅವುಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಹೆಚ್‌ಎಂಟಿ ವಿಷಯದಲ್ಲಿಯೂ ಅಡ್ಡಿ:
ಹೆಚ್‌ಎಂಟಿಗೆ ಜೀವ ಕೊಡಲು ನಾನು ಹೊರಟರೆ ಅದಕ್ಕೂ ರಾಜ್ಯ ಕಾಂಗ್ರೆಸ್ ಸರಕಾರ ಕೊಕ್ಕೆ ಹಾಕುತ್ತಿದೆ. ಅರಣ್ಯ ಇಲಾಖೆ ಭೂಮಿ ಅಂತ ಕಿತಾಪತಿ ಶುರು ಮಾಡಿದೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಕೇವಲ ರಾಜಕೀಯ ಬೇಕಷ್ಟೇ. ಜನತೆಗೆ ಶಾಶ್ವತವಾಗಿ ಬದುಕು ರೂಪಿಸಿ ಕೊಡುವ ಉದ್ದೇಶ ಇಲ್ಲ. ಕೇವಲ ಚುನಾವಣೆ ರಾಜಕೀಯಕ್ಕಾಗಿ ಶಾಶ್ವತ ಅಭಿವೃದ್ಧಿಯನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮುಂದೆ ಏನನ್ನೂ ಚರ್ಚೆ ಮಾಡದೇ ಬಜೆಟ್ ನಲ್ಲಿ ಏನನ್ನು ಕೊಟ್ಟಿಲ್ಲ ಎಂದು ಈಗ ಹುಯಿಲೆಬ್ಬಿಸಿದರೆ ಉಪಯೋಗವೇನು? ಪ್ರಸ್ತಾವನೆಗಳನ್ನು ತಂದು ಕೊಡುವುದು ಬಿಟ್ಟು ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದರೆ ಹೇಗೆ? ನನಗೆ ಕನ್ನಡಿಗರು ಕೊಟ್ಟಿರುವ ಶಕ್ತಿಯಿಂದಲೇ ವೈಜಾಗ್ ಸ್ಟೀಲ್ ಕಾರ್ಖಾನೆಯನ್ನು ಉಳಿಸುವುದು ಸಾಧ್ಯವಾಯಿತು. ಅದಕ್ಕೆ ಮೋದಿ ಅವರು ಕೊಟ್ಟ ಸಹಕಾರವನ್ನು ನಾನೆಂದೂ ಮರೆಯಲಾರೆ ಎಂದು ಸಚಿವರು ಹೇಳಿದರು.
ಮೊನ್ನೆ ನಾನು ಅಲ್ಲಿಗೆ ಹೋದಾಗ ವಿಮಾನ ನಿಲ್ದಾಣದಿಂದ 14 ಕಿ.ಮೀ. ದೂರ ಮೆರವಣಿಗೆ ಮಾಡಿದರು ಅಲ್ಲಿನ ಜನ. ಅವರು ತೋರಿದ ಪ್ರೀತಿ, ವಿಶ್ವಾಸವನ್ನು ಎಲ್ಲಾ ಕನ್ನಡಿಗರೂ ಸಮರ್ಪಣೆ ಮಾಡುತ್ತೇನೆ. ಅವರು ಕೊಟ್ಟ ಶಕ್ತಿಯಿಂದಲೇ ಇದೆಲ್ಲಾ ಆಗಿದೆ ಎಂದು ಅವರು ಹೇಳಿದರು.
ಭದ್ರಾವತಿ ಕಾರ್ಖಾನೆಗೂ ಮರುಜೀವ:
ಇದೇ ಹುರುಪಿನಲ್ಲಿ ಭದ್ರಾವತಿಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಮುಚ್ಚಿ ಹೋಗಿದೆ. ಅದಕ್ಕೆ ಮರು ಜೀವ ಪ್ರಯತ್ನಕ್ಕೂ ಕೈ ಹಾಕಿದ್ದೇನೆ. ಅದಕ್ಕೆ ಈ ಕಾಂಗ್ರೆಸ್ ಸರಕಾರ ಎಷ್ಟರಮಟ್ಟಿಗೆ ನನಗೆ ಬೆಂಬಲ ಕೊಡುತ್ತೋ, ಬಿಡುತ್ತೋ ಗೊತ್ತಿಲ್ಲ. ಈಚೆಗೆ ಜಾರ್ಖಂಡ್ ರಾಜ್ಯದ ಬೋಕಾರೋ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿ ವಿಸ್ತರಣಾ ಯೋಜನೆಗೆ ₹20,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಬೇರೆ ರಾಜ್ಯ ರಾಜ್ಯಗಳಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೋದರೆ ಅಲ್ಲಿನ ನಾಯಕರು ಪಕ್ಷಾತೀತವಾಗಿ ಸಹಕಾರ ಕೊಡುತ್ತಾರೆ. ನಮ್ಮವರಿಗೆ ಏನಾಗಿದೆ? ಕುಮಾರಸ್ವಾಮಿ ಕರ್ನಾಟಕಕ್ಕೆ ಬರುತ್ತಾನೆ ಎಂದರೆ ಇವರಿಗೆ ಹೊಟ್ಟೆನೋವು ಆಗುತ್ತದೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.
ಬಜೆಟ್ ಟೀಕಿಸುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ:
ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಏನು ಮಾಡಿದೆ ಎನ್ನುವುದು ಗೊತ್ತಿದೆ. ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುವುದಕ್ಕೆ ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ ಎಂದು ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರಲ್ಲದೆ, ವಿಕಸಿತ ಭಾರತ ಸಾಕಾರಕ್ಕೆ ಸಮಗ್ರ ಆಯವ್ಯಯವನ್ನು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಎಲ್ಲಾ ರಾಜ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ ಎಂದರು.
ಪ್ರತಿಯೊಂದು ಜಿಲ್ಲೆ, ರಾಜ್ಯಕ್ಕೆ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಬದಲು ಸಮಗ್ರ ಭಾರತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ರಾಜ್ಯಗಳ ಎಲ್ಲಾ ಜಿಲ್ಲೆಗಳ ಜನರಿಗೂ ಮುಟ್ಟುತ್ತವೆ ಎಂದು ಸಚಿವರು ಹೇಳಿದರು.
ಮುಂದಿನ ಮಾರ್ಚ್ ನಲ್ಲಿ ರಾಜ್ಯದಲ್ಲಿಯೂ ಇವರು ಬಜೆಟ್ ಮಂಡನೆ ಮಾಡುತ್ತಾರೆ, ಅಲ್ಲವೇ ಆಗ ನೋಡೋಣ ಇವರು ಎಷ್ಟು ಜಿಲ್ಲೆಗಳಿಗೆ, ತಾಲ್ಲೂಕುಗಳಿಗೆ ಏನೇನು ಕೊಡುತ್ತಾರೆ ಎಂದು ಎಂದು ಕುಟುಕಿದರು ಕೇಂದ್ರ ಸಚಿವರು.
ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. 1983ರವರೆಗೆ ಕಾಂಗ್ರೆಸ್ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರದಲ್ಲಿತ್ತು. ಹಾರಂಗಿ, ಹೇಮಾವತಿ, ವಾಟೆಹೊಳೆ, ಕಬಿನಿ ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರದಿಂದ ನಯಾಪೈಸೆ ದುಡ್ಡು ಕೊಡಲಿಲ್ಲ. ಐವತ್ತು ವರ್ಷ ದೇಶ ಆಳಿ ಈ ಯೋಜನೆಗಳಿಗೆ ದುಡ್ಡು ಕೊಟ್ಟರಾ ಅವರು. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಆಕ್ಸಿಲರೇಟೆಡ್ ಇರಿಗೇಷನ್ ಸ್ಕೀಂ ಅನ್ನು ಇಡೀ ದೇಶದಲ್ಲಿ ಜಾರಿಗೆ ತಂದರು. ಆಗ ಉತ್ತರ ಕರ್ನಾಟಕಕ್ಕೆ 15ರಿಂದ 20 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರು. ಕಾಂಗ್ರೆಸ್ ನವರು ಏನು ಕೊಟ್ಟರು. ಮೈಸೂರು ಮಹಾರಾಜರು, ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿದ್ದ ಕೆಆರ್ ಎಸ್ ನಿಂದ ಹಾಗೂ ದೇವೇಗೌಡರ ಹೋರಾಟದ ಫಲವಾಗಿ ನಿರ್ಮಾಣವಾದ ಹಾರಂಗಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟುಕೊಂಡು ಕೂತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಪ್ರಧಾನಮಂತ್ರಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದು ಹೇಳುತ್ತಾರೆ. ನಾನು ಎರಡು ಇಲಾಖೆಗಳ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ನೆರೆಯ ಆಂಧ್ರ ಪ್ರದೇಶದಲ್ಲಿ ವೈಜಾಗ್ ಸ್ಟೀಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಒಮ್ಮೆ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಮಾತು ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ. ಸಾಮಾನ್ಯವಾಗಿ ಮಾಡುವುದೂ ಇಲ್ಲ. ಮಂತ್ರಿಯಾದ ನಾನು ಮೇಲೆ ಆ ಕಾರ್ಖಾನೆಗೆ ಭೇಟಿ ಕೊಟ್ಟೆ. ಅಲ್ಲಿನ ಪರಿಸ್ಥಿತಿಯನ್ನು ಖುದ್ದು ಅವಲೋಕನ ಮಾಡಿದೆ. ನಂತರ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ, ಆರ್ಥಿಕ ಸಚಿವರ ಮನವೊಲಿಸಿ ಆ ಕಾರ್ಖಾನೆಗೆ ಜೀವ ಕೊಟ್ಟಿದ್ದೇನೆ. ಉಕ್ಕು ಕ್ಷೇತ್ರದಲ್ಲಿ ಆ ಕಾರ್ಖಾನೆಯನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತೇವೆ. ನನ್ನ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ವಿಶಾಖಪಟ್ಟಣಕ್ಕೆ ಹೋಗಿ ನೋಡಲಿ ಎಂದು ತರಾಟೆಗೆ ತೆಗೆದುಕೊಂಡರು ಅವರು.
ನರೇಂದ್ರಮೋದಿಯವರು ಯಾವಾಗಲೂ ವಿಕಸಿತ, ಆತ್ಮನಿರ್ಭರ ಭಾರತ ಬಗ್ಗೆ ಹೇಳುತ್ತಾರೆ. ಸ್ವಾತಂತ್ರ್ಯ ಶತಮಾನೋತ್ಸವ ಆಚರಣೆ ಮಾಡುವುದರೊಳಗೆ ನಮ್ಮ ದೇಶ ವಿಶ್ವದಲ್ಲಿ ಅಗ್ರ ಸ್ಥಾನಕ್ಕೆರಬೇಕು. ಅದಕ್ಕೆ ಅನೇಕ ಕಾರ್ಯಕ್ರಮಗಳನ್ನು ತರಲು ಮೋದಿಯವರ ಪ್ರಯತ್ನಗಳು ನಡೆದಿವೆ. ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ನಾಲ್ಕು ಕ್ಷೇತ್ರಗಳಿಗೆ ಉತ್ತೇಜನ ನೀಡಿದ್ದಾರೆ. ಬಡತನ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರು ಸ್ವಾವಲಂಬಿಯಾಗಿ ಬರಲು ಆರ್ಥಿಕ ಶಕ್ತಿ ತುಂಬಲು ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಅವರು ಈ ಸಂದರ್ಭದಲ್ಲಿ ಸಚಿವರ ಜತೆಯಲ್ಲಿ ಇದ್ದರು.
ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟಲಿಜೆನ್ಸ್) ಉದ್ಯಮಕ್ಕೆ ಒತ್ತು ನೀಡುವ ಬಗ್ಗೆ ಕೇಂದ್ರ ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಸಾಫ್ಟ್‌ವೇರ್ ಉದ್ಯಮಕ್ಕೆ ಕರ್ನಾಟಕ ಹಬ್ ಆಗಿದೆ. ಹೀಗಾಗಿ ಆರ್ಟಿಫಿಷಲ್ ಇಂಟಲಿಜೆನ್ಸ್ ಕ್ಷೇತ್ರಕ್ಕೆ ಕರ್ನಾಟಕದಲ್ಲೂ ಉತ್ತೇಜನ ಕೊಡಬೇಕೆಂದು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಈ ಬಗ್ಗೆ ನಾನು ಕೇಂದ್ರದಲ್ಲಿ ಸಂಬಂಧಪಟ್ಟ ಎಲ್ಲಾ ಸಚಿವರ ಜತೆಯೂ ಚರ್ಚೆ ನಡೆಸುತ್ತೇನೆ ಎಂದು ಅವರು ಹೇಳಿದರು.
ಮೈಕ್ರೋ ಫೈನಾನ್ಸ್ ಅವರು ಮನೆ ಬಳಿ ಬಂದು ಕಿರುಕುಳ ಕೊಟ್ಟರೆ ನನಗೆ ಕರೆ ಮಾಡಿ: HDK
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!