ಬೆಂಗಳೂರು : ಗ್ರಾಮ ಪಂಚಾಯತ, ತಾಲೂಕ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ಕಾರದ ಸಭೆ ಮತ್ತು ಸಮಾರಂಭಗಳನ್ನು ಆಯೋಜಿಸುವಾಗ ಪಾಲೀಸಬೇಕಾದ ಶಿಷ್ಠಾಚಾರದ ಕ್ರಮಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಸರ್ಕಾರಿ ಸಭೆ ಮತ್ತು ಸಮಾರಂಭಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುವಾಗ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಉಲ್ಲೇಖ(1) ಮತ್ತು (2) ರಲ್ಲಿ ಸಮಗ್ರವಾಗಿ ವಿವರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಧಿಕಾರದ ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ಕಾರದ ಆಯಾ ಇಲಾಖೆಯ ಅಧಿಕೃತ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಯ ಸಚಿವರ ಸಮಾಲೋಚನೆಯೊಂದಿಗೆ ನಿಗಧಿಪಡಿಸಿ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಹಾಗೂ ಕನಿಷ್ಠ 07 ದಿವಸಗಳ ಸಮಯಾವಕಾಶವನ್ನು ಪಡೆದುಕೊಳ್ಳುವಂತೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವ ಬಗ್ಗೆ, ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ ಮತ್ತು ಆಮಂತ್ರಣ ಪತ್ರಿಕೆಗಳನ್ನು ರಾಜ್ಯ ಆದ್ಯತಾ ಸೂಚಿ ಪಟ್ಟಿಯನ್ನು ಆಧರಿಸಿ ಸ್ಥಾನಗಳನ್ನು ನೀಡಿ ಅನುಕ್ರಮದಲ್ಲಿ ಮುದ್ರಿಸಲು ಮತ್ತು ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಸಮಾರಂಭ ಏರ್ಪಡಿಸುವ ಮುನ್ನ ಆಹ್ವಾನ ಪತ್ರಿಕೆಗೆ ಜಿಲ್ಲಾಧಿಕಾರಿಗಳ/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದುಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಅದಾಗ್ಯೂ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ, ತಾಲೂಕ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ಕಾರದ ಸಭೆ ಮತ್ತು ಸಮಾರಂಭಗಳನ್ನು ಆಯೋಜಿಸುವಾಗ ಆಹ್ವಾನ ಪತ್ರಿಕೆಗಳನ್ನು ಮುದ್ರಿಸುವಲ್ಲಿ ಮತ್ತು ಜನ ಪ್ರತಿನಿಧಿಗಳನ್ನು ಆಹ್ವಾನಿಸುವಲ್ಲಿ ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಆಹ್ವಾನ ಪತ್ರಿಕೆಯೊಂದಿಗೆ ಜನ ಪ್ರತಿನಿಧಿಗಳಿಗೆ ನೀಡುವಲ್ಲಿ ಸೂಚನೆಗಳನ್ನು ಪಾಲಿಸದೇ ಜಿಲ್ಲಾಡಳಿತಕ್ಕೆ ಮುಜುಗುರ ಉಂಟು ಮಾಡುವ ಸನ್ನಿವೇಶಗಳು ಪದೇ ಪದೇ ಉದ್ಭವಿಸುತ್ತಿರುವುದು ವಿಷಾದನೀಯವಾಗಿರುತ್ತದೆ ಹಾಗೂ ಪಂಚಾಯತಿ ಅಧಿಕಾರಿಗಳು, ತಾಲೂಕ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸದೇ ಇರುವುದು ಸಹ ಮುಖ್ಯ ಕಾರಣ ವಾಗಿರುತ್ತದೆ.
ಆದುದರಿಂದ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮವನ್ನು ಏರ್ಪಡಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಲ್ಲೇಖ(1) ಮತ್ತು (2) ರಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಿ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲು ಹಾಗೂ ಜನಪ್ರತಿನಿಧಿಗಳನ್ನು ಖುದ್ದಾಗಿ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಹ್ವಾನಿಸಲು ಕ್ರಮ ಕೈಕೊಳ್ಳುವುದು ಹಾಗೂ ಆಮಂತ್ರಣ ಪತ್ರಿಕೆಗಳಿಗೆ ಅನುಮೋದನೆಯನ್ನು ಪಡೆದುಕೊಳ್ಳುವಾಗ ಸಿಬ್ಬಂದಿಗಳನ್ನು ಕಳುಹಿಸದೇ ಖುದ್ದಾಗಿ ಬಂದು ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿಯವರ ಅನುಮೋದನೆ ಪಡೆದುಕೊಳ್ಳಲು ಸೂಚಿಸಿದೆ.
ಮುಂದುವರೆದು ಇನ್ನು ಮುಂದೆ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಲೋಪವಾದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಕೈಕೊಳ್ಳಲಾಗುವುದು.