ಕಲಬುರಗಿ : ವಿಕಸಿತ ಭಾರತದ ಸಾಕಾರಕ್ಕಾಗಿ ಮುನ್ನೋಟದ ಬಜೆಟ್ ಇದಾಗಿದೆ. ಒಟ್ಟಾರೆ 50 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಬಜೆಟ್ ಗಾತ್ರದಲ್ಲಿ ಶೇ 20ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ತೆಗೆದಿರಿಸಲಾಗಿದೆ. 11 ಲಕ್ಷ ಕೋಟಿ ವರೆಗಿನ ಮೊತ್ತವನ್ನು ಅಭಿವೃದ್ಧಿಯ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ವರ್ಗಗಳಿಗೆ ಹೆಚ್ಚಿನ ಬಲ ತುಂಬಲು ಎಸ್‌ಸಿ/ ಎಸ್‌ಟಿ ಮಹಿಳಾ ಉದ್ಯಮಿಗಳಿಗೆ ಮೊದಲ ಸಲ 2 ಕೋಟಿ ವರೆಗಿನ ಸಾಲ ಪಡೆಯಲು ಅವಕಾಶ ಒದಗಿಸಲಾಗಿದೆ. ಎಂಎಸ್‌ಎಂಇಗಳಿಗೆ ಹೆಚ್ಚಿನ ನೆರವು ನೀಡಲು ಉದ್ದೇಶಿಸಲಾಗಿದೆ. ಜೀವರಕ್ಷಕ ಔಷಧಿಗಳನ್ನು ಆಮದು ಮಾಡಲು ಆಮದು ಸುಂಕದಿಂದ ರಿಯಾಯತಿ ನೀಡಲಾಗಿದೆ. ಒಟ್ಟಾರೆ ಈ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹೊರೆ ಆಗದಿರುವಂತೆ ನೋಡಿಕೊಂಡಿದ್ದು, ಬಡವರನ್ನು ಮತ್ತಷ್ಟು ಆರ್ಥಿಕ ಸಬಲರನ್ನಾಗಿಸುವ ನಿಟ್ಟಿನಲ್ಲಿ, ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಪೂರಕವಾದ ಬಜೆಟ್ ಇದಾಗಿದೆ. ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಬೆಳೆಸುವ ಆಶಯವನ್ನು ಪ್ರಧಾನ ಮಂತ್ರಿಗಳು ಎರಡು ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಅದನ್ನು ಪೂರೈಸುವ ನಿಟ್ಟಿನಲ್ಲಿ ಪೂರಕವಾದ ಭರವಸೆಯ ಬಜೆಟ್ ಇದಾಗಿದೆ. ಇದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತೇಲ್ಕೂರ ತಿಳಿಸಿದರು.
ಬಜೆಟ್ ಗಾತ್ರ, ಬಂಡವಾಳ ವೆಚ್ಚ, ಆದ್ಯತಾ ವಲಯಗಳನ್ನು ಗಮನಿಸಿ ಬಜೆಟ್ ಅನ್ನು ವಿಶ್ಲೇಷಿಸಬೇಕಾಗಿದೆ. ಇದೇ ಮೊದಲ ಬಾರಿಗೆ ಬಂಡವಾಳ ವೆಚ್ಚದ ಹೂಡಿಕೆಗಾಗಿ 20 ಶೇ ಹಣವನ್ನು ಮೀಸರಿಸಲಾಗಿದೆ. ಇದರಿಂದ ಮೂಲಸೌಕರ್ಯಗಳ ವೃದ್ಧಿ, ಉದ್ಯೋಗಾವಕಾಶಗಳ ಹೆಚ್ಚಳ ಆಗಲಿದೆ.
ಗಡಿಯನ್ನು ರಕ್ಷಣೆ ಮಾಡಲು, ಆಂತರಿಕ ಭದ್ರತೆ ಹೆಚ್ಚಿಸಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದಲ್ಲಿ ಇವರು ಕನಿಷ್ಠ 40 ಸಾವಿರ ಕೋಟಿ ಕಂದಾಯ ಕೊರತೆಯ ಬಜೆಟ್ ಮಂಡಿಸುತ್ತಾರೆ. ಇನ್ನು ಬಂಡವಾಳ ವೆಚ್ಚಕ್ಕೆ ಆದ್ಯತೆ ಕೊಡುವ ಮಾತು ಎಲ್ಲಿದೆ? ಇಂತಹ ದುಸ್ಥಿತಿಗೆ ಕರ್ನಾಟಕವನ್ನು ಇಳಿಸಿರುವ ಕಾಂಗ್ರೆಸ್ ನಾಯಕರು ಕೇಂದ್ರದ ಬಜೆಟ್ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡುತ್ತಾರೆ ಎಂದು ತೇಲ್ಕೂರ ಟೀಕಿಸಿದರು.
Karnataka Weather: ಫೆಬ್ರವರಿ ಮೊದಲ ವಾರದಲ್ಲಿ ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab