ಬೆಂಗಳೂರು: ತೀವ್ರ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಚಿಕಿತ್ಸೆ ನೀಡಿದರೆ ಅವರು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಡವಾಗುವ ಸಾಮರ್ಥ್ಯ ಹೊಂದಲು ಶಕ್ತರಾಗಿರುತ್ತಾರೆ ಎಂದು ನಿಮ್ಹಾನ್ಸ್ ಹಾಗೂ ಲಿವ್ ಲವ್ ಲಾಫ್ ಫೌಂಡೇಷನ್ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದೆ.
೧೦ ತಿಂಗಳುಗಳ ಕಾಲ ಗ್ರಾಮೀಣ ಭಾಗದಲ್ಲಿ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ಅಧ್ಯಯನವು ಮಾನಸಿಕವಾಗಿ ಕುಗ್ಗಿದವರನ್ನು ಪುನಸ್ಚೇತನಗೊಳಿಸಿದರೆ ಅವರು ಸಹ ಎಲ್ಲರಂತೆಯೇ ಜೀವನ ನಡೆಸಲು ಸಶಸಕ್ತರು ಎಂಬುದು ಇದು ದೃಢಪಡಿಸಿದೆ.
ಅಧ್ಯಯನಕ್ಕೆ ಒಳಪಡಿಸಿದ ವ್ಯಕ್ತಿಗಳು ಹಾಗೂ ಕುಟುಂಬಗಳನ್ನು ಸಮುದಾಯ ಆಧರಿತ ಪುನಃಶ್ಚೇತನ (ಸಿಬಿಆರ್) ಕಾರ್ಯಕ್ರಮದ ಫಲಿತಾಂಶವನ್ನು ಸಂಶೋಧನೆಯು ಕೇಂದ್ರೀಕರಿಸಿತ್ತು. ಲೈವ್‌ಲವ್‌ಲಾಫ್ ಅಡಿಯಲ್ಲಿ ಒಂದು ಬಾರಿಯ ಅನುದಾನದ ಮೂಲಕ ಸ್ವಯಂ ಉದ್ಯೋಗಿ ಅವಕಾಶಗಳನ್ನು ಒದಗಿಸಲಾಗಿತ್ತು. ಇದಕ್ಕೆ ಹಣವನ್ನು ಕುಟುಂಬದ ನೇತೃತ್ವದ ಸಂಘಟನೆಯಿಂದ ಹೊಂದಿಸಲಾಗಿತ್ತು. ಈ ಯೋಜನೆಯಲ್ಲಿ ಭಾಗಿಯಾದವರು ಸ್ಥಳೀಯವಾಗಿ ಸೂಕ್ತವಾದ ಜೀವನಾವಶ್ಯಕತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕುರಿ ಕಾಯುವುದು ಮತ್ತು ಟೇಲರಿಂಗ್ ಮಾಡುವುದು ಇತ್ಯಾದಿಯಲ್ಲಿ ಅವರು ತೊಡಗಿಸಿಕೊಂಡಿದ್ದರು.
“ತೀವ್ರ ಮಾನಸಿಕ ಅನಾರೋಗ್ಯವನ್ನು ಹೊಂದಿರುವವರು ಸ್ವಯಂ ಉದ್ಯೋಗವನ್ನು ನಡೆಸಬಹುದು ಎಂಬುದನ್ನು ಸಾಬೀತುಪಡಿಸುವ ಮೂಲಕ ನಾವು ಕೇವಲ ಇದರ ಕುರಿತ ಮಿಥ್ಯವನ್ನು ನಿವಾರಣೆ ಮಾಡುತ್ತಿಲ್ಲ. ಬದಲಿಗೆ, ಸುಸ್ಥಿರ ಮತ್ತು ಸಮಗ್ರ ಮಾನಸಿಕ ಆರೋಗ್ಯ ನೆರವಿಗೆ ಅಡಿಪಾಯವನ್ನೂ ಹಾಕುತ್ತಿದ್ದೇವೆ ಎಂದು ದಿ ಲಿವ್ ಲವ್ ಲಾಫ್ ಫೌಂಡೇಶನ್‌ನ ಮುಖ್ಯಸ್ಥರು ಮತ್ತು ಅಧ್ಯಯನದ ಸಹ ಲೇಖಕರಾಗಿರುವ ಡಾ. ಶ್ಯಾಮ ಭಟ್ಟ ಹೇಳಿದ್ದಾರೆ.
ಡ್ಯೂಕ್ ಯುನಿವರ್ಸಿಟಿಯ ಸೈಕಿಯಾಟ್ರಿ ಮತ್ತು ಮೆಡಿಸಿನ್‌ನ ಪ್ರೊಫೆಸರ್ ಹಾಗೂ ದಿ ಲಿವ್ ಲವ್ ಲಾಫ್ ಫೌಂಡೇಶನ್‌ನ ಟ್ರಸ್ಟೀ ಆಗಿರುವ ಡಾ. ಮುರಳಿ ದೊರೈಸ್ವಾಮಿ, ಎಂಬಿಬಿಎಸ್, ಎಫ್‌ಆರ್‌ಸಿಪಿ ಅವರು ಹೇಳುವಂತೆ “ತೀವ್ರ ಮಾನಸಿಕ ಅನಾರೋಗ್ಯವನ್ನು ಹೊಂದಿರುವವರ ವಿಶಿಷ್ಟ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಣಕಾಸಿನ ಮತ್ತು ಮಾನಸಿಕ ಆರೋಗ್ಯದ ನೆರವನ್ನು ಬಳಸಿಕೊಂಡು ನಡೆಸಿದ ಪ್ರಯೋಗಗಳಲ್ಲಿ ಇದು ಮಹತ್ವದ್ದಾಗಿದ್ದು, ಸಮಗ್ರ ಬೆಂಬಲ ವ್ಯವಸ್ಥೆಯ ಅನುಕೂಲವನ್ನು ಒತ್ತಿ ಹೇಳುವ ವಿಶಿಷ್ಟ ಅಧ್ಯಯನ ಇದಾಗಿದೆ. ಇದು ಬಡತನ, ನಿರುದ್ಯೋಗ ಮತ್ತು ಮಾನಸಿಕ ಅನಾರೋಗ್ಯದ ಮಧ್ಯೆ ಇರುವ ಬಹು ಆಯಾಮದ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಕುಟುಂಬ ಆಧರಿತ ಸಂಘಟನೆಯಿಂದ ಹಣವನ್ನು ಒದಗಿಸುವಿಕೆಯು ಸಾಮಾಜಿಕ ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಪರಿಕರವಾಗಿದ್ದು, ಸಮಾಜಕ್ಕೆ ಅರ್ಥವತ್ತಾಗಿ ಕೊಡುಗೆ ನೀಡುವುದಕ್ಕೆ ಮಾನಸಿಕ ಅನಾರೋಗ್ಯ ಹೊಂದಿರುವವರಿಗೆ ಅನುಕೂಲ ಮಾಡಿಕೊಡುತ್ತದೆ ಎಂದರು.