ಬೆಂಗಳೂರು: ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರಿಗೆ ಸ್ಥಳ ನಿಯೋಜನೆ ಮಾಡಲು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯ ವತಿಯಿಂದ ವಿಶೇಷ ಚೇತನರ ಸಬಲೀಕರಣಕ್ಕಾಗಿ ರೂಪಿಸಲಾಗಿರುವ ಕಾರ್ಯಕ್ರಮಗಳ ಅನುಷ್ಠಾನ, ನಗರ ಪುನರ್ವಸತಿ ಕಾರ್ಯಕರ್ತರ ನಿಯೋಜನೆಗೆ ಸಂಬಂಧಿಸದಂತೆ ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಬಿಎಂಪಿಯ ಎಲ್ಲಾ 8 ವಲಯಗಳಗಳಲ್ಲಿ ಬರುವ ವಾರ್ಡ್ ಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತ (ವಿ.ಆರ್.ಡಬ್ಲ್ಯೂ) ರುಗಳ ನೇಮಕ ಮಾಡಿಕೊಳ್ಳಬೇಕು. ನಂತರ ವಿಶೇಷ ಚೇತನ ವರ್ಗದವರನ್ನು ಸರ್ವೆ ಮಾಡಿ ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಪಾಲಿಕೆಯ ಕಲ್ಯಾಣ ವಿಭಾಗದಿಂದ ವಿಶೇಷ ಚೇತನರ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಯಾವೆಲ್ಲಾ ಯೋಜನೆಗಳಿಗೆ ಎಂಬುರ ಕುರಿತು ಸರಿಯಾದ ಮಾಹಿತಿ ನೀಡಬೇಕು. ಜೊತೆಗೆ ಆ ಯೋಜನೆಗಳೆಲ್ಲವೂ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕೆಂದು ಸೂಚಿಸಿದರು.
ವಿ.ಆರ್.ಡಬ್ಲ್ಯೂಗಳ ಕಾರ್ಯವೈಖರಿ:
ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದನಗರ ಪುನರ್ವಸತಿ ಕಾರ್ಯಕರ್ತರುಗಳನ್ನು (ವಿ.ಆರ್.ಡಬ್ಲ್ಯೂ) ಮಾಸಿಕ ಗೌರವ ಧನದ ಆಧಾರ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಿವಿಧ ಷರತ್ತುಗಳ ಆಧಾರದ ಮೇಲೆ ನೇಮಕಗೊಂಡ ಬಳಿಕ, ಅವರನ್ನು ಪಾಲಿಕೆಯ ವಾರ್ಡ್ ಗಳಲ್ಲಿ ನಿಯೋಜಿಸಿ, ಅವರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಲ್ಯಾಣ ವಿಭಾಗದಿಂದ ಸಿಗುವ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಅವುಗಳು ಸಿಗುವಂತೆ ಮಾಡಲಿದ್ದಾರೆ.
ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಿ:
ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ವಿಶೇಷ ಚೇತನ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ಸಂಬಂಧ 4ನೇ ಫೆಬ್ರವರಿ 2025 ರೊಳಗೆ ಅಂತರ್ಜಾಲ https://site.bbmp.gov.in/departmentwebsites/welfare/welfareactivities.html ಗೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ವಿಶೇಷ ಚೇತನರಿಗೆ ತಿಳಿಸಿದರು.
ಕ್ರಿಯಾ ಯೋಜನೆ ರೂಪಿಸಿ:
2025-26ನೇ ಸಾಲಿನ ಪಾಲಿಕೆಯ ಆಯವ್ಯಯದಲ್ಲಿ ವಿಶೇಷ ಚೇತನರ ಸಬಲೀಕರಣಕ್ಕಾಗಿ ಹೊಸದಾಗಿ ರೂಪಿಸಬಹುದಾದ ಯೋಜನೆಗಳ ಕುರಿತು ಸಲಹೆಗಳನ್ನು ನೀಡಿದರೆ, ಅವುಗಳಿಗೆ ಸಂಬಂಧಿಸಿದಂತೆ ಸೇರ್ಪಡೆ ಮಾಡಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ನಿರ್ದೇಶನ ನೀಡಿದರು.
ವಿಶೇಷ ಚೇತನರಿಗೆ ಸಿಗುವ ಸೌಲಭ್ಯಗಳ ವಿವರ:
1. ವಿಶೇಷ ಚೇತನರಿಗೆ ಒಂಟಿ ಮನೆ ನಿರ್ಮಾಣ
2. ವಿಶೇಷ ಚೇತನರಿಗೆ ಆರೋಗ್ಯ ಕಾರ್ಯಕ್ರಮ:
* ಸರ್ಕಾರ ಹೆಸರಿಸಿದ ಜೀವ ವಿಮಾ/ ಆರೋಗ್ಯ ಯೋಜನೆಯ ವಾರ್ಷಿಕ ಪ್ರೀಮಿಯಂ ಕಂತುಗಳನ್ನು ಪಾವತಿಸಲು ಧನಸಹಾಯ
* ಕೃತಕ ಅಂಗ ಜೋಡಣೆಗೆ ಆರ್ಥಿಕ ಸಹಾಯ
* ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಅನ್ವಯ ಗುರುತಿಸಿರುವ 21 ಅಂಗವೈಕಲ್ಯಗಳನ್ನು ಸರಿಪಡಿಸುವ ಸಲುವಾಗಿ ಶಸ್ತ್ರ ಚಿಕಿತ್ಸೆಗೆ ಗರಿಷ್ಟ ರೂ. 50,000 ಗಳ ವರೆಗೆ ಆರ್ಥಿಕ ಸಹಾಯ
* ಗಂಭೀರ ಸ್ವರೂಪ ಖಾಯಿಲೆಗಳಿಂದ ಬಳಲುತ್ತಿರು ವವರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೂಚನೆ: ಕರ್ನಾಟಕ ಮೆಡಿಕಲ್ ಅಟೆಂಡನ್ಸ್ ರೂಲ್ಸ್ 1963 ಪ್ರಕಾರ ಅನುಷ್ಟಾನ ಗೊಳಿಸುವುದು
* ದೈಹಿಕ ವ್ಯಾಯಾಮ ಮತ್ತು ಮಾತಿನ ವ್ಯಾಯಮಕ್ಕೆ ಸಹಾಯಧನ
* ಇತರೆ ವಿಶೇಷ ಪ್ರಕರಣಗಳು
3. ವಿಶೇಷ ಚೇತನದವರಿಗೆ ಶೈಕ್ಷಣಿಕ ಕಾರ್ಯಕ್ರಮ:
* ಸರ್ಕಾರಿ ಅಥವಾ ಖಾಸಗಿ ಶಾಲಾ/ಕಾಲೇಜುಗಳಲ್ಲಿ 1ನೇ ತರಗತಿಯಿಂದ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಹಾಗು ವಿಶೇಷ ಚೇತನರ ಕುಟುಂಬದ ಒಂದು ಮಗ ಅಥವಾ ಮಗಳಿಗೆ ಶುಲ್ಕ ಮರುಪಾವತಿ (ಪಾವತಿಸಿರುವ ಬೋಧನಾ ಶುಲ್ಕ ಮತ್ತು ಪರೀಕ್ಷಾ ಶುಲ್ಕ ಮೊತ್ತ ಗರಿಷ್ಠ ರೂ.50,000/- ಮೀರದಂತೆ)
* ವಿದೇಶಿ ವ್ಯಾಸಂಗಕ್ಕೆ ಸಹಾಯಧನ / ಶುಲ್ಕ ಮರುಪಾವತಿ.
* ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ನ ಪೂರ್ವ ಪರೀಕ್ಷೆಯಲ್ಲಿ ಪಾಸಾಗಿರುವ ವಿದ್ಯಾರ್ಥಿ/ಅಭ್ಯರ್ಥಿಗಳಿಗೆ ಪ್ರಮುಖ ಹಾಗೂ ಸಂದರ್ಶನ ಆನ್ಲೈನ್ ತರಬೇತಿ ಪಡೆದಿರುವವರಿಗೆ ಗರಿಷ್ಠ ರೂ.50,000/- ಗಳ ಮರುಪಾವತಿ.
4. ವಿಶೇಷ ಚೇತನದವರಿಗೆ ಆರ್ಥಿಕ ಪ್ರೋತ್ಸಾಹ:
* ಅಂಧ/ದೃಷ್ಠಿಮಾಂಧ್ಯವುಳ್ಳವರಿಗೆ ಸಂಗೀತ ಸಾಧನಗಳನ್ನು ಖರೀದಿಸಲು ಸಹಾಯಧನ.(ನೇರ ನಗದು ವರ್ಗಾವಣೆ)
* ಡಿ-ಫಾರ್ಮಾ ಪರವಾನಗಿ ಹೊಂದಿರುವ ವಿಶೇಷ ಚೇತನರು ರವರು “ಔಷಧ ಮಳಿಗೆ” ಅನ್ನು ಪ್ರಾರಂಭಿಸಲು ಗರಿಷ್ಠ ರೂ.1,00,000 ಲಕ್ಷಗಳ ಗರಿಷ್ಠ ಸಹಾಯಧನ.(ನೇರ ನಗದು ವರ್ಗಾವಣೆ)
* ಐ.ಟಿ.ಐ ಉತ್ತೀರ್ಣರಾಗಿರುವ ವಿದ್ಯಾರ್ಥಿ ರವರು ಸ್ವಂತ ಸಣ್ಣ ಕೈಗಾರಿಕೋದ್ಯಮವನ್ನು ಪ್ರಾರಂಭಿಸಲು ಗರಿಷ್ಠ ರೂ. 1,00,000 ಲಕ್ಷಗಳ ಸಹಾಯಧನ.
5. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶೇಷ ಚೇತನ ಕ್ರೀಡಾ ಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಆರ್ಥಿಕ ಸಹಾಯ:
* ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿರುವ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಧನ.
* ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶೇಷ ಚೇತನ ಕ್ರೀಡಾ ಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾ ಕಿಟ್ (ಹೊರಾಂಗಣ ಮತ್ತು ಒಳಾಂಗಣ ಕ್ರೀಡೆ) ಕ್ರೀಡೆಗೆ ತಕ್ಕಂತೆ ಖರೀದಿಸಲು ಧನಸಹಾಯ.
6. ವಿಶೇಷ ಚೇತನ ಮಕ್ಕಳ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ
7. ವಿಶೇಷ ಚೇತನ ವ್ಯಕ್ತಿಗಳಿಗೆ ತ್ರಿಚಕ್ರವಾಹನಗಳ ವಿತರಣೆ
8. ವಿಶೇಷ ಚೇತನದ ವರ್ಗದ ಫಲಾನುಭವಿಗಳಿಗೆ ವಿತರಿಸಲು ಸಾಮಗ್ರಿಗಳ ಖರೀದಿ
* ವಿಶೇಷ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವ ವಿಶೇಷ ಚೇತನ ಕ್ರೀಡಾಪಟುವಿಗೆ ಕ್ರೀಡೆಗೆ ಅವಶ್ಯಕವಿರುವ ಸುರಕ್ಷಾ ಉಪಕರಣಗಳನ್ನು ಖರೀದಿಸುವುದು ಅಥವಾ ಖರೀದಿಸಲು ಸಹಾಯಧನ ನೀಡುವುದು. (ರೂ. 140.00 ಲಕ್ಷಗಳು)
* ಎಲೆಕ್ಟ್ರಿಕಲ್ ವ್ಹೀಲ್ ಚೇರ್ ವಿತರಣೆ (ರೂ.700.00 ಲಕ್ಷಗಳು)
ಈ ಸಂದರ್ಭದಲ್ಲಿ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರಾದ ನಾಗಭೂಷಣ್, ಬೆಂಗಳೂರು ನಗರ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ, ಪಾಲಿಕೆಯ ಎಲ್ಲಾ ವಲಯಗಳ ಕಲ್ಯಾಣ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು, ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.