ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣದ ಅವಧಿಯನ್ನು ಡಿಸೆಂಬರ್ 31, 2025ರವರೆಗೆ ಸರ್ಕಾರ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಸರ್ಕಾರಿ ನೌಕರರು ಈ ಅವಧಿಯೊಳಗೆ ಪರೀಕ್ಷೆ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿಗೆ ಅನರ್ಹವಾಗಲಿದ್ದಾರೆ.
ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ,ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಧಿ 31-12-24 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಸದರಿ ಪರೀಕ್ಷೆ ಪಾಸ್ ಮಾಡಲು ಡಿಸೆಂಬರ್ 31 2025 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಯಲ್ಲಿ ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3) ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.