ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಆದೇಶದಂತೆ ‘ತಾಲ್ಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ” ರಚಿಸುವ ಕುರಿತು ಆದೇಶವಾಗಿದೆ (ಪ್ರತಿ ಲಗತ್ತಿಸಿದೆ). ಸದರಿ ಆದೇಶಗಳಂತೆ ಎಲ್ಲಾ ತಾಲ್ಲೂಕುಗಳಲ್ಲಿ ಈ ಸಮಿತಿಗಳನ್ನು ರಚಿಸಲು ಆಯಾ ತಾಲ್ಲೂಕು ಕೇಂದ್ರವು ಒಳಪಡುವ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರನ್ನು ಮತ್ತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಕ್ರಮವಹಿಸಿ ವರದಿ ಮಾಡಲು ತಿಳಿಸಿದೆ.
ತಹಸಿಲ್ದಾರ್, ತಾಲೂಕು ಪಂಚಾಯಿತಿ ಇಒ, ಬಿಇಒ, ಕಾರ್ಯಪಾಲಕ ಇಂಜಿನಿಯರ್, ಹೆಚ್ಚು ದಾಖಲಾತಿ ಹೊಂದಿರುವ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಪಿಯು ಕಾಲೇಜಿನ ಪ್ರಾಂಶುಪಾಲರು, ಡಯಟ್ ನ ಒಬ್ಬ ಹಿರಿಯ ಉಪನ್ಯಾಸಕರು, ಇಬ್ಬರು ಎಸ್.ಡಿ.ಎಂ.ಸಿ. ಸದಸ್ಯರು, ಸರ್ಕಾರದಿಂದ ಅನುಮೋದಿತ ಐವರು ನಾಮ ನಿರ್ದೇಶಿತ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ. ಮಕ್ಕಳ ದಾಖಲಾತಿ, ನಿರಂತರ ಹಾಜರಾತಿ, ಕಲಿಕೆ ವೃದ್ಧಿಗೆ ಈ ಸಮಿತಿ ಕ್ರಮ ಕೈಗೊಳ್ಳಲಿದೆ. ಮಕ್ಕಳು ಶಾಲೆ ಬಿಡದಂತೆ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ವಾಪಸ್ ಕರೆತರಲು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿದೆ.