ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಜ.19 ರ ಇಂದು ಮತ್ತು 25 ರಂದು ಪರೀಕ್ಷೆಗಳನ್ನು ನಡೆಸಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ದಿನಾಂಕ: 19-01-2025 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಪತ್ರಿಕೆ ಪರೀಕ್ಷೆ ಹಾಗೂ ದಿ: 25-01-2025 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಲಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ 277 ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಭಾನುವಾರ ರಾಜ್ಯದ 478 ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್ಸಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ.
ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋಗ್ರಫಿ ಮಾಡಲಾಗುವುದು. ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಇರುತ್ತದೆ. ಜೊತೆಗೆ ಜಾಮರ್ಗಳನ್ನು ಅಳವಡಿಸಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಎಲೆಕ್ಟಾçನಿಕ್ ವಸ್ತುಗಳಿಗೆ ಅವಕಾಶ ಇರುವುದಿಲ್ಲ.
ನಿಯೋಜಿತ ಪೊಲೀಸರಿಂದ ಅಭ್ಯರ್ಥಿಗಳ ತಪಾಸಣೆ ನಡೆಸಿ ಕೇಂದ್ರಗಳ ಒಳಗೆ ಬಿಡಲಾಗುವುದು. ಅಂಗವಿಕಲ ಅಭ್ಯರ್ಥಿಗಳಿಗ ಲಿಪಿಕಾರರ ಸೇವೆಯನ್ನು ಹಾಗೂ ಚಲನವಲನ ವೈಕಲ್ಯವುಳ್ಳ ವಿಕಲಚೇತನ ಅಭ್ಯರ್ಥಿಗಳಿಗೆ ವೀಲ್ಚೇರ್ ಒದಗಿಸಲಾಗುವುದು.
ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರ ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ ಮತ್ತು ಕಂಪ್ಯೂಟರ್ ಇಂಟರ್ನೆಟ್ ಕೇಂದ್ರಗಳನ್ನು ಜ.19 ಮತ್ತು 25ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರಗೆ ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಯು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತರದಂತೆ ಆದೇಶಿಸಲಾಗಿದೆ
ಪರೀಕ್ಷಾ ಕೇಂದ್ರಗಳಲ್ಲಿ ಪೀಠೋಪಕರಣ ವ್ಯವಸ್ಥೆ, ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ನಿಯೋಜಿತ ಅಧಿಕಾರಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪರೀಕ್ಷೆಗಳನ್ನು ಶಾಂತಿಯುತವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಯಶಸ್ವಿಯಾಗಿ ನಡೆಸಲು ಸಿದ್ಧತೆ ಮಾಡಲಾಗಿದೆ.