ಬೆಂಗಳೂರು : 2024ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಸಲ್ಲಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಸುತ್ತೋಲೆ ಹೊರಡಿಸಲಾಗಿದೆ.
1. 2024 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ತಮ್ಮ ಘಟಕದ ಅರ್ಹ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರ ಶಿಫಾರಸ್ಸುಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಇದರೊಂದಿಗೆ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ Soft copy & Hard Copy ಸಿಡಿ/ ಪೆನ್‌ಡ್ರೈವ್‌ನಲ್ಲಿ ದಿನಾಂಕ:05-02-2025ರ ಒಳಗಾಗಿ ಈ ಕಛೇರಿಗೆ ತಲುಪುವಂತೆ ತಪ್ಪದೇ ಕಳುಹಿಸಿಕೊಡಲು ಕೋರಲಾಗಿದೆ.
2. ಈ ಸುತ್ತೋಲೆಯೊಂದಿಗೆ ಲಗತ್ತಿಸಲಾದ ನಮೂನೆಗಳಲ್ಲಿಯೇ ಶಿಫಾರಸ್ಸುಗಳನ್ನು ಕಳುಹಿಸಿಕೊಡುವುದು, ಹಿಂದಿನ ಅವಧಿಯಲ್ಲಿನ ಹಳೆಯ ನಮೂನೆಗಳನ್ನು ಉಪಯೋಗಿಸಬಾರದು.
3. ಈ ಸುತ್ತೋಲೆಯನ್ನು ಎಲ್ಲಾ ಉಪ-ವಿಭಾಗಗಳು ಮತ್ತು ಠಾಣೆಗಳಿಗೆ ಕಳುಹಿಸಿ, ಎಲ್ಲಾ ಅಧೀನಾಧಿಕಾರಿಗಳು ಮತ್ತು ಅಧೀನ ಸಿಬ್ಬಂದಿಗಳ ಗಮನಕ್ಕೆ ತರಲು ಪ್ರಚುರ ಪಡಿಸುವುದು.
4. ಘಟಕಾಧಿಕಾರಿಗಳು ಶಿಫಾರಸ್ಸುಗಳನ್ನು ಕಳುಹಿಸುವ ಮೊದಲು ಅಗತ್ಯ ತಪಾಸಣೆ ನಡೆಸಿ, ಎಲ್ಲಾ ಅರ್ಹತೆ ಹಾಗೂ ನಿಬಂಧನೆಗಳನ್ನು ಪೂರೈಸುವ ಅರ್ಹ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಮಾತ್ರ ಕಳುಹಿಸಬೇಕೆ ಹೊರತು ಸ್ವೀಕರಿಸಿದ ಎಲ್ಲಾ ಮನವಿಗಳನ್ನು ಕಳುಹಿಸತಕ್ಕದ್ದಲ್ಲ.
5. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಪದಕ ಪಡೆದ ಅಧಿಕಾರಿ / ಸಿಬ್ಬಂದಿಗಳ ಹೆಸರನ್ನು ಮತ್ತೊಮ್ಮೆ ಇದೇ ಪದಕಕ್ಕೆ ಶಿಫಾರಸ್ಸು ಮಾಡಬಾರದೆಂದು ತಿಳಿಸಲಾಗಿದೆ.
6. ಪದಕಕ್ಕೆ ಶಿಫಾರಸ್ಸು ಮಾಡುತ್ತಿರುವ ಯಾವುದೇ ಅಧಿಕಾರಿ / ಸಿಬ್ಬಂದಿಯವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ / ಚಾಲ್ತಿ ಶಿಕ್ಷೆ ಬಾಕಿ ಇದ್ದಲ್ಲಿ ಅಥವಾ ಕೈಗೊಳ್ಳಲು ಉದ್ದೇಶಿಸಿದ್ದಲ್ಲಿ ಹಾಗೂ ಆಮಾನತ್ತಿನ ಮೇಲೆ ಇದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಗಳ ಶಿಫಾರಸ್ಸುಗಳನ್ನು ಕಳುಹಿಸಬಾರದೆಂದು ಸೂಚಿಸಿದೆ ಹಾಗೂ ಮುಂದೆ ಆದೇಶಿಸಬಹುದಾದ ವಿಚಾರಣೆಗಳಿದ್ದರೆ/ಯಾವುದಾದರೂ ನ್ಯಾಯಾಂಗ ವಿಚಾರಣೆ /ಕ್ರಿಮಿನಲ್ ಮೊಕದ್ದಮೆ /ಲೋಕಾಯುಕ್ತ/ಎಸಿಬಿ ಪ್ರಕರಣ ಇತ್ಯಾದಿ ಕುರಿತು ತಪ್ಪದೆ ಪರಿಶೀಲಿಸಿದ ನಂತರವೇ ಶಿಫಾರಸ್ಸುಗಳನ್ನು ಕಳುಹಿಸುವುದು.
7. ಪದಕಕ್ಕೆ ಶಿಫಾರಸ್ಸು ಮಾಡಲಾದ ಯಾವುದೇ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಪದಕಕ್ಕೆ ಆಯ್ಕೆಗೊಂಡ ಬಗ್ಗೆ ಅಂತಿಮ ಪಟ್ಟಿ ಘೋಷಣೆಯಾಗುವವರೆಗೆ ಯಾವುದಾದರೂ ಇಲಾಖಾ ಶಿಸ್ತು ಕ್ರಮ / ಅಮಾನತ್ತು / ಪ್ರತಿಕೂಲ ವರದಿ ಇತ್ಯಾದಿ ಕಂಡುಬಂದಲ್ಲಿ ಕೂಡಲೇ ಈ ಕಛೇರಿಗೆ ಮಾಹಿತಿ ಕಳುಹಿಸಿಕೊಡುವುದು,
8. ಗುಣಕಥನವು ಈ ಕೆಳಕಂಡ ಮಾನದಂಡಗಳನ್ನು ಮಾತ್ರ ಹೊಂದಿದ್ದು, 2 ಪುಟಗಳಿಗೆ ಮೀರದಂತೆ ಸಂಕ್ಷಿಪ್ತವಾಗಿರತಕ್ಕದ್ದು.
1. ಅಸಾಧಾರಣ ಕಾರ್ಯ ಕುಶಲತೆ.
2. ಸ್ಪಷ್ಟವಾಗಿ ಎದ್ದು ಕಾಣುವ ಕರ್ತವ್ಯ ನಿಷ್ಠೆ,
3. ಯಾವುದೇ ಗಂಭೀರವಾದ ಅಥವಾ ವ್ಯಾಪಕವಾಗಿ ಹಬ್ಬಿದ ಅಪರಾಧದ ಅಥವಾ ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ತೋರಿದ ಆಸಾಮಾನ್ಯ ಸೇವೆ.
4. ಜಟಿಲ ಪ್ರಕರಣಗಳಲ್ಲಿ ತೋರಿದ ಅಸಾಧಾರಣಾ ತನಿಖಾ ಕೌಶಲ್ಯ.
5. ಉನ್ನತ ಮಟ್ಟದ ಬಂದೋಬಸ್ತ್ ವ್ಯವಸ್ಥೆಯ ಸಂಘಟನೆ.
6. ರಾಜ್ಯ/ರಾಷ್ಟ್ರ/ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ತೋರಿದ ಅತ್ಯುತ್ತಮವಾದ ಪ್ರತಿಭೆ.
7. ಎದ್ದು ಕಾಣುವ ಧೈರ್ಯ ಮತ್ತು ಸಾಹಸವನ್ನು ಮೆರೆದ ಇತರೆ ಯಾವುದೇ ಕಾರ್ಯ,
ಮೇಲ್ಕಂಡ ಮಾನದಂಡಗಳ ಅಂಶಗಳ ಬಗ್ಗೆ 2024ನೇ ಸಾಲಿಗೆ ಆ ಒಂದು ವರ್ಷದ ಅವಧಿಯಲ್ಲಿ ತೋರಿದ ಅಸಾಧಾರಣ ಕಾರ್ಯ ನಿರ್ವಹಣೆ ಮಾತ್ರ ಪದಕ ಪ್ರದಾನಕ್ಕೆ ಪರಿಗಣಿಸಲಾಗುವುದು.
ಮಾನ್ಯ ಮುಖ್ಯಮಂತ್ರಿಗಳ ಪದಕಗಳಿಗೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಾನ್-ಐಪಿಎಸ್) ಮತ್ತು ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ವಲಯ/ವಿಭಾಗದ ಮಟ್ಟದಲ್ಲಿ ಆಯ್ಕೆ ಮಾಡುವ ಸಲುವಾಗಿ ಈ ಕೆಳಗಿನ ವಲಯ/ವಿಭಾಗ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ತಮ್ಮ ವಿಭಾಗದಲ್ಲಿರುವ ಅರ್ಹ ಅಧಿಕಾರಿ ಮತ್ತು ಸಿಬ್ಬಂದಿಯವರ ಪಟ್ಟಿಯನ್ನು ಸಿದ್ಧಪಡಿಸಿ, ಪ್ರಧಾನ ಕಚೇರಿಗೆ ಕಳುಹಿಸತಕ್ಕದ್ದು.