ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಹಂಚಿಕೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಸರ್ಕಾರದ ಉಪ ಕಾರ್ಯದರ್ಶಿ ರಾಜ್ಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ 2024-25 ನೇ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸದರಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 10.00 ಕೋಟಿಗಳಂತೆ ಒಟ್ಟು 1890.00 ಕೋಟಿಗಳ ಅನುದಾನದಲ್ಲಿ ರಸ್ತೆ,ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಲೆಕ್ಕ ಶೀರ್ಷಿಕೆ-5054-03-337-0-75-059 ರಡಿ ಕೈಗೆತ್ತಿಕೊಳ್ಳಲು ಉಲ್ಲೇಖ 1 ರಲ್ಲಿ ಆರ್ಥಿಕ ಇಲಾಖೆಯು ಹಂಚಿಕೆ ಮಾಡಿರುತ್ತದೆ ಎಂದಿದ್ದಾರೆ.
ಆದುದರಿಂದ, ಉಲ್ಲೇಖ-1 ರಲ್ಲಿ ಹಂಚಿಕೆಯಾಗಿ ಅನುಬಂಧ-1 ರಲ್ಲಿನ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾಗಿರುವ ಅನುದಾನಕ್ಕೆ ಆಯಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರೊಂದಿಗೆ ಸಮಾಲೋಚಿಸಿ ಈ ಕೆಳಕಂಡ ಷರತ್ತಿಗೊಳಪಟ್ಟು ಕ್ರಿಯಾ ಯೋಜನೆಯನ್ನು ವಿಧಾನಸಭಾ ಕ್ಷೇತ್ರವಾರು ಪಡೆದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ರವರು ಸರ್ಕಾರಕ್ಕೆ ಸಲ್ಲಿಸಲು ಕೋರಿದೆ.
ಷರತ್ತುಗಳು:
1. ಇತ್ತೀಚಿಗೆ ಮಳೆಯಿಂದ ಹಾನಿಗೊಳಗಾದ ರಸ್ತೆ ಅಭಿವೃದ್ಧಿಪಡಿಸಲು ಆದ್ಯತೆ ನೀಡುವುದು.
2. ಸದರಿ ರಸ್ತೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಸ್ತೆ ಜಾಲದೊಳಗೆ ಇರತಕ್ಕದ್ದು
3. ಮೇಲಿನಂತೆ ತೆಗೆದುಕೊಳ್ಳಲಾಗುವ ರಸ್ತೆ ಕಾಮಗಾರಿಗಳನ್ನು ಸಣ್ಣ ಸಣ್ಣ ಕಾಮಗಾರಿಗಳಾಗಿ ವಿಭಜಿಸಿ ತೆಗೆದುಕೊಳ್ಳತಕ್ಕದ್ದಲ್ಲ.
4. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರು ಡಿ.ಆರ್.ಆರ್.ಪಿ ಪಟ್ಟಿಯಂತೆ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಆದ್ಯತೆಯನುಸಾರ ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವುದು.
5. ರಸ್ತೆಗಳನ್ನು ಆಯ್ಕೆ ಮಾಡುವಾಗ ನ್ಯಾಯಾಲಯ ಪ್ರಕರಣ, ಲೋಕಾಯುಕ್ತ ಉಭಯ ವಿಧಾನ ಮಂಡಲಗಳ ವಿವಿಧ ಸಮಿತಿಯಲ್ಲಿ (ಅರ್ಜಿ ಸಮಿತಿ, ಭರವಸೆ, ಪಂಚಾಯತ್ ರಾಜ್ ಸ್ಥಳೀಯ ಸಂಸ್ಥೆಗಳು) ಇತ್ಯರ್ಥಪಡಿಸಲು ಬಾಕಿಯಿರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು.
6. ಸದರಿ ಅನುದಾನದಲ್ಲಿ ರಸ್ತೆ, ಚರಂಡಿ ಮತ್ತು ಸೇತುವೆಗಳನ್ನು ಮಾತ್ರ ಕ್ರಿಯಾ ಯೋಜನೆಯಲ್ಲಿ ಅಳವಡಿಸತಕ್ಕದ್ದು.
7. ಕಾಮಗಾರಿಗಳನ್ನು ಅಗತ್ಯಕ್ಕನುಗುಣವಾಗಿ ಎಂಜಿಎನ್‌ಆರ್‌ಇಜಿಎ ಯೋಜನೆಯೊಂದಿಗೂ ಒಗ್ಗೂಡಿಸುವ ಮೂಲಕ ಆಯ್ಕೆ ಮಾಡಬಹುದಾಗಿದೆ. ಆದರೆ ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಎಂಜಿಎನ್‌ಆರ್‌ಇಜಿಎ ಮಾರ್ಗಸೂಚಿಗಳಲ್ಲಿ ರಸ್ತೆ ನಿರ್ವಹಣೆಗೆ ಇರುವ ಮಾನದಂಡಗಳನ್ನೇ ಕಡ್ಡಾಯವಾಗಿ ಪಾಲಿಸತಕ್ಕದ್ದು.
8. ಪಿಎಂಜಿಎಸ್‌ವೈ ಮತ್ತು ಎನ್‌ಜಿಎನ್‌ಆರ್‌ವೈ ಕಾರ್ಯಕ್ರಮಗಳಡಿ ಅಭಿವೃದ್ಧಿಪಡಿಸಿ ನಿರ್ವಹಣಾ ಅವಧಿ ಪೂರ್ಣಗೊಂಡು ದುರಸ್ಥಿ ಮಾಡಲೇಬೇಕಾದ ರಸ್ತೆಗಳನ್ನು ಆದ್ಯತೆ ಮೇಲೆ ಆಯ್ಕೆ ಮಾಡುವುದು.
9. ರಸ್ತೆಗಳನ್ನು ಆಯ್ಕೆ ಮಾಡುವಾಗ ತುಂಡು ಗುತ್ತಿಗೆ ನೀಡಲೆಂದೇ ಕಾಮಗಾರಿಗಳನ್ನು ರೂ.5.00 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿ ಕಾಮಗಾರಿಗಳನ್ನು ಆಯ್ಕೆ ಮಾಡುವಂತಿಲ್ಲ.
10. ಒಂದೊಮ್ಮೆ ಹೊಸದಾಗಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದ್ದಲ್ಲಿ ಸದರಿ ಆಯ್ಕೆ ಮಾಡಿದ ರಸ್ತೆಯು ಡಿಆರ್‌ಆರ್‌ಪಿಯಲ್ಲಿದ್ದು ಹಾಗೂ ಪ್ರಮುಖ ಗ್ರಾಮೀಣ ರಸ್ತೆಯಾಗಿದ್ದು, ಸದರಿ ರಸ್ತೆಯು ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ, ಮಾರುಕಟ್ಟೆ ಶೈಕ್ಷಣಿಕ ಸಂಸ್ಥೆಯನ್ನು ಹಾಗೂ ತನ್ನ ವ್ಯಾಪ್ತಿಯ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವಂತಹ ರಸ್ತೆಗಳಾಗಿರಬೇಕು.
11. ಆಯ್ಕೆ ಮಾಡುವ ರಸ್ತೆಗಳನ್ನು /ಡಾಂಬರ್/ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದು ಕಡ್ಡಾಯ.
12. ಮಣ್ಣಿನ/ಜಲ್ಲಿ ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳತಕ್ಕದಲ್ಲ.
13. ರೂ.5.00 ಲಕ್ಷ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ ಎಂದಿದ್ದಾರೆ.
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat