ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ವಿಚಾರದಲ್ಲಿ ಹುಡುಗಾಟಿಕೆ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕೆಪಿಎಸ್ಸಿ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ರಾಜ್ಯ ಸರಕಾರಕ್ಕೆ ಬುದ್ಧಿ ಹೇಳುವ ದೃಷ್ಟಿಯಿಂದ ಹೋರಾಟಕ್ಕೆ ಬೆಂಬಲ ನೀಡಿದ್ದಾಗಿ ತಿಳಿಸಿದರು.
ರಾಜ್ಯ ವಿದ್ಯಾರ್ಥಿಗಳ ಒಕ್ಕೂಟದಿಂದ ಕೆಪಿಎಸ್ಸಿಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಹೋರಾಟ ನಿರತರಾಗಿದ್ದಾರೆ. ಪದೇಪದೇ ಪರೀಕ್ಷೆ ಮುಂದೂಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆ, ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಸಮಸ್ರಾರು ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ವಿವರಿಸಿದರು.
ನಾನು, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಮೊದಲಾದ ಮುಖಂಡರು ಇಲ್ಲಿಗೆ ಬಂದಿದ್ದು, ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು. ಈ ಬೆಂಬಲ ಸಾಂಕೇತಿಕವಲ್ಲ; ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜಾತಿ ಜನಗಣತಿ ಪಗಡೆ ಆಟವಾಗಿ ಪರಿಗಣಿಸಿದ ಸಿಎಂ
ಜಾತಿ ಜನಗಣತಿಯನ್ನು ಮುಖ್ಯಮಂತ್ರಿಯವರು ಪಗಡೆ ಆಟ ಎಂದು ಪರಿಗಣಿಸಿದಂತಿದೆ. ಯಾವಾಗ ಅವರ ಸಿಎಂ ಕುರ್ಚಿ ಅಲ್ಲಾಡುತ್ತದೋ ಅವಾಗ ಜಾತಿ ಜನಗಣತಿಯನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳುತ್ತಾರೆ. ಕುರ್ಚಿ ಭದ್ರವಾಗುವ ಹಾಗಿದ್ದಾಗ ಅದನ್ನು ಮುಂದೂಡುವುದಾಗಿ ಹೇಳುತ್ತಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ಒಂದೆಡೆ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದೆ. ಜಾತಿ ಜನಗಣತಿ ವಿಚಾರದಲ್ಲಿ ಹುಚ್ಚಾಟ ಮಾಡುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು. ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತವರು ಈ ರೀತಿ ಹುಡುಗಾಟಿಕೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ನುಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ತಿಳಿಸಿದರು. ಕನ್ನಡ ಭಾಷೆಯನ್ನೇ ಕೊಲೆ ಮಾಡುವ ಸರಕಾರ ಇದು ಎಂದು ಟೀಕಿಸಿದರು. ಒಂದು ಸಾರಿ ಆದ ತಪ್ಪು ಮತ್ತೆ ಮರುಕಳಿಸದಂತೆ ತಿದ್ದಿಕೊಳ್ಳುವ ಯೋಗ್ಯತೆಯನ್ನೇ ಕಳೆದುಕೊಂಡಿದೆ. ಮುಖ್ಯಮಂತ್ರಿಗಳು ಯಾಕೆ ಇದರ ಕಡೆ ಗಮನ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಹುದ್ದೆ ಅಂಗಡಿಯಲ್ಲಿ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗೋದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
2024-25ನೇ ಸಾಲಿನ ‘GDP’ ಬೆಳವಣಿಗೆ ದರ ಶೇ.6.4ಕ್ಕೆ ಏರಿಕೆ : ‘FICCI’ ಆರ್ಥಿಕ ಮುನ್ನೋಟ ಸಮೀಕ್ಷೆ