ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ವಂಚಕರು ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತಿದ್ದು, ಇದೀಗ ಸಂಕ್ರಾಂತಿಗೆ ಶಾಪಿಂಗ್ ಮಾಡಿ ಹಬ್ಬದ ದಿನದಂದು ಉಚಿತ ರೀಚಾರ್ಜ್ ಪಡೆಯಿರಿ ಸೇರಿದಂತೆ ಹಲವು ಉಡುಗೊರೆ ಇರುವ ಮೆಸೇಜ್ ಕಳುಹಿಸಿ ವಂಚನೆ ಎಸಗುತ್ತಿದ್ದಾರೆ.
ನಿಮ್ಮ ಫೋನ್ ಮತ್ತು ವಾಟ್ಸಾಪ್ ಸಂಖ್ಯೆಗಳಿಗೆ ಬಂದಿರುವ ಸಂದೇಶಗಳನ್ನು ನೋಡಿದರೆ ಬ್ಯಾಂಕ್ ಖಾತೆಗಳಲ್ಲಿರುವ ಹಣವೆಲ್ಲಾ ಖಾಲಿಯಾಗಲಿದೆ ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್‌ಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೆಸರಿನಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಂಕ್ರಾಂತಿ ಹಬ್ಬದ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಗಳನ್ನು ಆಯೋಜಿಸಿ ಆಹ್ವಾನ ನೀಡಲಾಗುತ್ತಿದೆ. ಹೊಸ ಬಟ್ಟೆ, ವಾಹನ ಖರೀದಿಗೆ ರಿಯಾಯಿತಿ ನೀಡುವಂತೆ ಇ-ಮೇಲ್ ಹಾಗೂ ವಾಟ್ಸ್ ಆಪ್ ನಂಬರ್ ಗಳಿಗೆ ಜಾಹೀರಾತುಗಳನ್ನು ಕಳುಹಿಸಲಾಗುತ್ತಿದೆ. ಇತ್ತೀಚಿಗೆ ಸಿಎಂ ಹೆಸರಿನಲ್ಲಿ ಉಚಿತ ರೀಚಾರ್ಜ್ ಆಫರ್ ಎಂದು ಲಿಂಕ್ ಕಳುಹಿಸುತ್ತಿದ್ದಾರೆ, ರೂ.749 ಮೌಲ್ಯದ 3 ತಿಂಗಳ ರೀಚಾರ್ಜ್ ಎಲ್ಲರಿಗೂ ಉಚಿತ ಮತ್ತು ಸೀಮಿತ ಅವಧಿಗೆ ಮಾತ್ರ ಎಂದು ಲಿಂಕ್ ಕಳುಹಿಸುತ್ತಿದ್ದಾರೆ. ಕ್ಲಿಕ್ ಮಾಡಿದವರ ಫೋನ್‌ಗಳನ್ನು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುತ್ತಿದ್ದಾರೆ.