ಬೆಂಗಳೂರು: ನಮ್ಮ ನಡುವೆ ಬಾಂಧವ್ಯ ಬೆಸೆಯಲು ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಕ ಕಾರ್ಯಕ್ರಮ ಮತ್ತು ನಮ್ಮ ಭಾಗದ ಗ್ರಾಮೀಣ ಕ್ರೀಡೆಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ಹೇಳಿದರು.
ಅವರು ಇಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಲಹಂಕದ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿರುವ ನಾವು ನಮ್ಮವರು ಒಂದಾಗಿ ಸೇರಲು ನಮ್ಮಲ್ಲೇ ಭಾಂದವ್ಯ ಬೆಸೆಯಲು ಈ ರೀತಿಯ ಕಾರ್ಯಕ್ರಮ ಆಯೋಜನೆ ಮುಖ್ಯವಾಗಿದೆ ಎಂದು ಹೇಳಿದರು.
ನಮ್ಮ ನಮ್ಮಲ್ಲೇ ಭೇದ ಭಾವ ಮಾಡದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸೋಣ ಎಂದು ಹೇಳಿದರು.
ಮಹಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ, ಬೆಂಗಳೂರಿನಲ್ಲಿ ಎಲ್ಲ ಪ್ರದೇಶಗಳಲ್ಲಿಯೂ ಉತ್ತರ ಕರ್ನಾಟಕ ಸಂಘಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಭಾಗದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸಂಘಗಳು ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇರುವ ಉತ್ತರ ಕರ್ನಾಟಕ ಭಾಗದ ಜನರೆಲ್ಲ ಸೇರಿ ಮಹಾ ಸಂಸ್ಥೆ ಕಟ್ಟಿಕೊಂಡಿದ್ದು, ಆ ಮೂಲಕ ನಮ್ಮ ಭಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ನಮ್ಮ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಶರಣಪ್ಪ, ಮಾಜಿ ಅಧ್ಯಕ್ಷ ಕಲ್ಲಪ್ಪ ನವಣಿ, ಮಹಾಸಂಸ್ಥೆಯ ಸಹ ಸಂಘಟನಾ ಕಾರ್ಯದರ್ಶಿ ಶಾಂತೇಶ ಹಿರೇಮಠ, ನಿರ್ದೇಶಕ ರಾಮನಗೌಡ ಬಿರಾದಾರ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!