ಬೆಂಗಳೂರು: ಕಾಂಗ್ರೆಸ್ಸಿಗರ ಮಿಡ್ ನೈಟ್ ಮೀಟಿಂಗ್ ನಡುವೆ ಕರ್ನಾಟಕ ಬಡವಾಗುತ್ತಿದೆ, ಜನರು ಪರಿತಪಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ರೋಶ ಹೊರಹಾಕಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಕಾನೂನು ಪ್ರಕೋಷ್ಠದ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಹೊರಗಡೆಯಿಂದ ಬಂದವರು ಎಂದು ಆಡಳಿತ ಪಕ್ಷದಲ್ಲಿ ಕೆಲವರಿಗೆ ಅನಿಸಿದೆ. ಒಂದು ಬಾರಿ 5 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಬಾರಿಗೆ 2 ವರ್ಷ ಸಿಎಂ ಆಗಿದ್ದು, ಅವರೇ ಅಧಿಕಾರ ಬಿಟ್ಟುಕೊಡಬೇಕೆಂಬ ಚರ್ಚೆ ಈಗ ಕಾಂಗ್ರೆಸ್ಸಿನಲ್ಲಿ ಆರಂಭವಾಗಿದೆ ಎಂದು ವಿವರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಹಳ ಮುಕ್ತವಾಗಿ ಮಾತನಾಡಿದ್ದರು. 25 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಂಡಿರಲಿಲ್ಲ. ಆಗ ಅವರ ಗುರುಗಳು ‘ಅಧಿಕಾರ ಸಿಗಲಿಲ್ಲ ಅಂದ್ರೆ ಅಧಿಕಾರವನ್ನು ಒದ್ದು ಕಿತ್ಕೋಬೇಕು’ ಎಂದಿದ್ದರಂತೆ; ಆಗ ಡಿ.ಕೆ.ಶಿವಕುಮಾರ್ ಅವರು ಅಧಿಕಾರವನ್ನು ಒದ್ದು ಕಿತ್ಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 25 ವರ್ಷಗಳ ನಂತರ ಸಿದ್ದರಾಮಯ್ಯನವರು ಸಿಎಂ ಆಗಿ 2 ವರ್ಷ ಪೂರೈಸಿದ್ದು, ಅಧಿಕಾರ ಬಿಟ್ಟು ಕೊಡುವರೇ ಇಲ್ಲವೇ ಎಂಬ ಅನುಮಾನ ಅವರಿಗೆ ಕಾಡುತ್ತಿದೆ. ಆದ್ದರಿಂದ ಅವರು ಒದ್ದು ಕಿತ್ಕೊಳ್ಳುವ ವಿಷಯವನ್ನು ನೆನಪು ಮಾಡಿಕೊಂಡಿದ್ದಾರೆ ಎಂದು ನುಡಿದರು.
ಡಿ.ಕೆ.ಶಿವಕುಮಾರ್ ಎಂದರೆ ಹಠವಾದಿಗಳು; ಒದ್ದು ಕಿತ್ಕೊಳ್ಳುವ ವಿಷಯದಲ್ಲಿ ನಿಸ್ಸೀಮರು. ಹಾಗಾಗಿ ಆ ಪ್ರಕ್ರಿಯೆಗೆ ಅವರು ಚಾಲನೆ ನೀಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯನವರು ಅವರ ಅವಧಿ ಪೂರ್ಣವಾದರೂ ಬಿಟ್ಟು ಕೊಡಲು ಮನಸ್ಸು ಬರುತ್ತಿಲ್ಲ. ಸಚಿವರ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಇಲ್ಲದ ವೇಳೆ ಡಿನ್ನರ್ ಮೀಟಿಂಗ್ ಅವರು ಪ್ರಾರಂಭಿಸಿದ್ದಾರೆ. ಇನ್ನೊಂದೆಡೆ ವಿಳಂಬವಾಗಿ ಮಲಗುವ ಡಿ.ಕೆ.ಶಿವಕುಮಾರ್ ಲೇಟ್ ನೈಟ್ ಮೀಟಿಂಗ್ ಶುರುಮಾಡಿದ್ದಾರೆ ಎಂದು ತಿಳಿಸಿದರು. ಇದು ಸದ್ಯದ ರಾಜಕೀಯ ಪರಿಸ್ಥಿತಿ ಎಂದರು.
ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ಸಿನ ಸರಣಿ ಸಭೆಗಳು ನಡೆಯುತ್ತಿವೆ. ಆಡಳಿತ ಪಕ್ಷದ ಶಾಸಕರ ಡಿನ್ನರ್ ಮೀಟಿಂಗ್, ಮಿಡ್‍ನೈಟ್ ಮೀಟಿಂಗ್‍ಗಳ ನಡುವೆ ನಮ್ಮ ಕಾನೂನು ಪ್ರಕೋಷ್ಠದ ಸಭೆ ಆಯೋಜಿಸಿರುವುದು ಬಹಳ ವಿಶೇóಷ ಎಂದರು. ಈ ಸಭೆಗೆ 95 ಜನ ಅಪೇಕ್ಷಿತರಿದ್ದು, 85 ಜನರು ಭಾಗವಹಿಸಿದ್ದಾರೆ. ತಮಗೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.
ಡಿನ್ನರ್ ಮೀಟಿಂಗ್, ಮಿಡ್‍ನೈಟ್ ಮೀಟಿಂಗ್‍ಗಳ ವಿಚಾರ ಪತ್ರಿಕೆಗಳಲ್ಲಿ- ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವೆ ಅವರ ಹೈಕಮಾಂಡಿನ ಮಟ್ಟದಲ್ಲಿ ಅಧಿಕಾರದ ಒಪ್ಪಂದ, ಸೂತ್ರ ಏರ್ಪಟ್ಟಿದೆ. ಅಭಿವೃದ್ಧಿ ಬಗ್ಗೆ ಒಪ್ಪಂದ ಆಗಿಲ್ಲ; ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾದಂತಿದೆ ಎಂದು ವ್ಯಂಗ್ಯವಾಡಿದರು.
ಹಿಂದೆ ಟೆಸ್ಟ್ ಮ್ಯಾಚ್ ನೋಡುತ್ತಿದ್ದಿರಿ; ಬಳಿಕ ಏಕದಿನ ಪಂದ್ಯ ನಡೆಯುತ್ತಿತ್ತು. ಬಳಿಕ 20-20 ಮ್ಯಾಚ್‍ಗಳು ಜನಪ್ರಿಯವಾಗಿವೆ. ಹಾಗೇ ರಾಜ್ಯದ ಜನರು ಆಶೀರ್ವಾದ ಮಾಡಿ, ಸ್ಪಷ್ಟ ಬಹುಮತ ಕೊಟ್ಟು ಅಧಿಕಾರ ಹಂಚುವಿಕೆ ಬಗ್ಗೆ ಚರ್ಚೆ ಮುಖ್ಯವಾಗಿದೆಯೇ ಹೊರತು, ಅಭಿವೃದ್ಧಿಯ ವಿಚಾರ ಪ್ರಮುಖವಾಗಿಲ್ಲ ಎಂದು ಹೇಳಿದರು.
ಒಂದು ಕಡೆ ಸರಕಾರದ ಬೇಜವಾಬ್ದಾರಿಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಸರಕಾರ ಆಡಳಿತಕ್ಕೆ ಬಂದು 2 ವರ್ಷಗಳು ಕಳೆದರೂ ಅಭಿವೃದ್ಧಿಯನ್ನು ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ನೋಡಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ಚುನಾವಣೆ ಹೊರತುಪಡಿಸಿ ಬೇರೆ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿಲ್ಲ; ಅವರ ಪ್ರವಾಸ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ ಎಂದು ಆಕ್ಷೇಪಿಸಿದರು. ರಾಜ್ಯ, ಬೆಂಗಳೂರು ಮಹಾನಗರದಲ್ಲಿ ರಸ್ತೆಗುಂಡಿ ಮುಚ್ಚಿಸುವ ಕೆಲಸವೂ ರಾಜ್ಯ ಸರಕಾರದಿಂದ ಆಗುತ್ತಿಲ್ಲ; 50 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಂಡರ್‍ಗ್ರೌಂಡ್ ಟನೆಲ್ ರೋಡನ್ನು ಬೆಂಗಳೂರಿನಲ್ಲಿ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಇದರ ಕುರಿತು ಯಾರ ಜೊತೆಗೂ ಚರ್ಚೆಯನ್ನೂ ಮಾಡಿಲ್ಲ ಎಂದು ಟೀಕಿಸಿದರು.
ತಜ್ಞರು, ಚುನಾಯಿತ ಪ್ರತಿನಿಧಿಗಳ ಈ ವಿಷಯ ಚರ್ಚಿಸಿಲ್ಲ; ಅಂಡರ್‍ಗ್ರೌಂಡ್ ಟನೆಲ್ ರಸ್ತೆಯ ಬಜೆಟ್, ಗುಣಮಟ್ಟ, ಗಾತ್ರ ಯಾರಿಗೂ ಗೊತ್ತಾಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಅನಿಸಿರಬಹುದು ಎಂದು ವ್ಯಂಗ್ಯವಾಗಿ ತಿಳಿಸಿದರು. ಆನೆ ನಡೆದಂತೆ ದಾರಿ ಎಂಬಂತೆ ಮನ ಬಂದಂತೆ ಸರಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರದ ಮದ, ದರ್ಪ ಹೆಚ್ಚಾಗಿದೆ. ವಿಪಕ್ಷ ಸೇರಿ ಯಾರೂ ಕೂಡ ಸರಕಾರವನ್ನು ಟೀಕಿಸಬಾರದೆಂಬ ಧೋರಣೆ ಇವರದು. ವಿಪಕ್ಷದವರನ್ನು ಬೆದರಿಸುತ್ತಿದ್ದು, ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಯಲು ಸಾಧ್ಯವೇ ಎಂದು ಕೇಳಿದರು. ಹಿಂದೂ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಿದ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸುಗಳನ್ನು ದಾಖಲಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸು, ಬೆದರಿಕೆ ಒಡ್ಡಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇದು ಆಡಳಿತ ಪಕ್ಷದ ಘನಂದಾರಿ ಕೆಲಸ. ಒಟ್ಟಾರೆಯಾಗಿ ಅಭಿವೃದ್ಧಿಶೂನ್ಯ ಸರಕಾರ ಇದು ಎಂದ ಅವರು, ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ರಕ್ಷಣೆ ಕಾನೂನು ಪ್ರಕೋಷ್ಠದ ಆದ್ಯ ಕರ್ತವ್ಯ. ಹಾಗಾಗಿ ಈ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿ, ಪ್ರಕೋಷ್ಠದ ಕಾರ್ಯಚಟುವಟಿಕೆಗಳ ವಿವರ ನೀಡಿದರು. ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಎನ್.ವಿ. ಫಣೀಶ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕ ಲಕ್ಷ್ಮಣ್ ಸಿ.ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ವಿಶ್ವನಾಥ್ ಮತ್ತು ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಹ್ವಾನಿತ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer