ಬೆಂಗಳೂರು: ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಜನವರಿಯಲ್ಲೇ 5,000 ರೈತರಿಗೆ ಸಾಗುವಳಿ ಚೀಟಿ ನೀಡುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಿಂದ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ (ಭೂ ದಾಖಲೆಯ ಸಹಾಯ ನಿರ್ದೇಶಕ) ಅಧಿಕಾರಿಗಳ ಜೊತೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜನವರಿ 15ರ ಒಳಗೆ 15,000 ಫಲಾನುಭವಿಗಳಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಈ ಗುರಿಯನ್ನು ಸಾಧಿಸಲಾಗದಿದ್ದರೂ ಇದೇ ಅವಧಿಯಲ್ಲಿ ಕನಿಷ್ಟ 5600ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿರುವುದು ಹಾಗೂ ಎಲ್ಲಾ ಜಿಲ್ಲೆ-ತಾಲೂಕುಗಳಲ್ಲೂ ಈ ಸಂಬಂಧ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದು ಉತ್ತಮ ಬೆಳವಣಿಗೆ. ಶೀಘ್ರವೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರುಗೊಳಿಸಿ” ಎಂದು ಕಿವಿಮಾತು ಹೇಳಿದರು.
ನಮೂನೆ 1 to 5 ಪೋಡಿ ದುರಸ್ಥಿಗೆ ಒತ್ತಡ:
ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ ಕಳೆದ ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಚಾಲನೆ ನೀಡಲಾಯಿತು. ಆದರೆ, ಹಲವಾರು ತಾಲೂಕುಗಳಲ್ಲಿ 1-5 ನಮೂನೆ ಪೋಡಿ ದುರಸ್ಥಿ ಮುಗಿದಿದ್ದರೂ ಸಂಬಂಧಪಟ್ಟ ಫೈಲುಗಳನ್ನು 6-10 ನಮೂನೆ ಸರ್ವೇ ಕೆಲಸಕ್ಕಾಗಿ ಭೂ ದಾಖಲೆಯ ಸಹಾಯ ನಿರ್ದೇಶಕರಿಗೆ ಕಳುಹಿಸಲು ತಹಶೀಲ್ದಾರರುಗಳು ಮೀನಾಮೇಷ ಎಣಿಸುತ್ತಿರುವುದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.
“ಬಳ್ಳಾರಿ ತಾಲೂಕಿನಲ್ಲಿ ಈವರೆಗೆ 397 ಹಾಗೂ ಬೆಳಗಾವಿಯಲ್ಲಿ 147 ಪ್ರಕರಣಗಳಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸ ಮುಗಿದಿದೆ. ಆದರೆ, ಯಾವ ಪ್ರಕರಣವನ್ನು ತಹಶೀಲ್ದಾರರು ಮುಂದಿನ ಹಂತದ ಕೆಲಸಕ್ಕಾಗಿ ಎಡಿಎಲ್‌ಆರ್‌ಗಳಿಗೆ ಕಳುಹಿಸಿಲ್ಲ. ಇದೇ ರೀತಿ ಚಿಕ್ಕೋಡಿ, ಅಥಣಿ, ಔರಾದ್, ಬೀದರ್ ಚಿತ್ರದುರ್ಗ, ಚಾಮರಾಜನಗರ, ಗುಂಡ್ಲುಪೇಡೆ, ಹುಮ್ನಾಬಾದ್, ಚಳ್ಳಕೆರೆ ಹೊಳಲ್ಕೆರೆ ಸೇರಿದಂತೆ ಹಲವಾರು ತಾಲೂಕುಗಳಲ್ಲಿ ದುರಸ್ಥಿ ಕೆಲಸ ಮುಗಿದಿದ್ದರೂ ಎಡಿಎಲ್‌ಆರ್ ಗಳಿಗೆ ಕಳುಹಿಸಿರುವ ಫೈಲುಗಳ ಸಂಖ್ಯೆ ಶೂನ್ಯ. ಜನರೇನು ನಿಮ್ಮ ಬಳಿ ಬಂದು ಸಲಾಂ ಹೊಡೆಯಬೇಕು ಎಂದು ನೀವು ಹೀಗೆ ಕಾಯಿಸುತ್ತಿದ್ದೀರಾ?” ಎಂದು ತಹಶೀಲ್ದಾರರ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
“ತಹಶೀಲ್ದಾರರು 1-5 ನಮೂನೆ ಪೋಡಿ ದುರಸ್ಥಿ ಕೆಲಸ ಮುಗಿಸಿ ಎಡಿಎಲ್‌ಆರ್ ಗೆ ಕಳುಹಿಸಿದರೆ ಮಾತ್ರ ಸರ್ವೇ ಕೆಲಸ ಮುಗಿಸಿ ಜನರಿಗೆ ಸೂಕ್ತ ದಾಖಲೆ ನೀಡುವುದು ಸಾಧ್ಯ. ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಚೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದರೂ ಸಹ ಅಧಿಕಾರಿಗಳು ಹೀಗೆ ಮಂದಗತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
GOOD NEWS: ಬಗರ್ ಹುಕುಂ ರೈತರಿಗೆ ಸಿಹಿಸುದ್ದಿ: ಅರ್ಜಿ ಸಲ್ಲಿಸಿದವರು ಮೃತಪಟ್ಟಿದ್ದರೂ ಕುಟುಂಬಸ್ಥರಿಗೆ ಭೂಮಿ ಮಂಜೂರು
BREAKING: ದ್ವಿತೀಯ ಪಿಯುಸಿ, SSLC ವಾರ್ಷಿಕ ಪರೀಕ್ಷೆ-1ರ ‘ಅಂತಿಮ ವೇಳಾಪಟ್ಟಿ’ ಪ್ರಕಟ