ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಈ ಬೆನ್ನಲ್ಲೇ ಬಿಎಂಟಿಸಿಯಿಂದ ಬಸ್ ಪಾಸ್ ದರಗಳನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಇಂದು ಮಧ್ಯ ರಾತ್ರಿಯಿಂದಲೇ ಪರಿಷ್ಕೃತ ನೂತನ ದರಗಳು ಜಾರಿಗೊಳ್ಳಲಿದ್ದಾವೆ.
ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300ರಿಂದ ರೂ.350ಕ್ಕೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.
ಇನ್ನೂ ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸು ದರ ರೂ.945 ಇದ್ದದ್ದನ್ನು ರೂ.1080ಕ್ಕೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಮಾಸಿಕ ಪಾಸು ದರ ರೂ.1050ರಿಂದ ರೂ.1200ಕ್ಕೆ ಹೆಚ್ಚಳವಾಗಿದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು ಟೋಲ್ ಶುಲ್ಕ ಒಳಗೊಂಡಂತೆ ರೂ.2200 ರಿಂದ ರೂ.2350ಕ್ಕೆ ಏರಿಕೆ ಮಾಡಲಾಗಿದೆ.
ವಾಯು ವಜ್ರ ದೈನಿಕ ಪಾಸಿನ ದರವನ್ನು ರೂ.120 ರಿಂದ ರೂ.140ಕ್ಕೆ ಏರಿಕೆ ಮಾಡಲಾಗಿದೆ. ಮಾಸಿಕ ಪಾಸ್ ದರ ರೂ.1800ರಿಂದ 2000ಕ್ಕೆ ಹೆಚ್ಚಳ ಮಾಡಲಾಗಿದೆ. ವಾಯುವಜ್ರ ಮಾಸಿಕ ಪಾಸು ದರವನ್ನು ರೂ.3755ರಿಂದ 4000ಕ್ಕೆ, ವಿದ್ಯಾರ್ಥಿ ವಜ್ರ ಮಾಸಿಕ ಪಾಸು ದರ ರೂ.1200ರಿಂದ ರೂ.1400ಕ್ಕೆ ಹೆಚ್ಚಳ ಮಾಡಲಾಗಿದೆ.ಈ ಮೂಲಕ ಸಿಲಿಕಾನ್ ಸಿಟಿ ಜನರಿಗೆ ಶಾಕ್ ನೀಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ