ಬೆಂಗಳೂರು : ಇತ್ತೀಚಿಗೆ ಕಡ್ಡಾಯಗೊಳಿಸಲಾಗಿರುವ ಈ ಖಾತೆ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ನಾಳೆ ಅಂದರೆ ದಿನಾಂಕ: 09-01-2025 ರಂದು ಬೆ. 11:00 ಗಂಟೆಯಿಂದ ಮ. 1:00 ಗಂಟೆಯವರೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣ, ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಇಲ್ಲಿ ಸಾರ್ವಜನಿಕರು , ಬಿಲ್ಡರ್ ಗಳು ಹಾಗೂ ಡೆವಲಪರ್ ಗಳ ಸಭೆಯನ್ನು ಕರೆಯಲಾಗಿದೆ ಎಂದು ಬೆಂಗಳೂರಿನ ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜಗದೀಶ ಅವರು ತಿಳಿಸಿದ್ದಾರೆ.
ಆಸ್ತಿ ನೋಂದಣಿಯಲ್ಲಿ ಲೋಪಗಳನ್ನು ತಡೆಯಲು ಹಾಗೂ ಅಕ್ರಮವಾಗಿ ಆಸ್ತಿಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರದ ನೋಂದಣಿ ಸಂದರ್ಭದಲ್ಲಿ ಈ ಖಾತೆಯನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ.
ಇದೀಗ ಈ-ಖಾತೆ ಇಲ್ಲದ ನೋಂದಣಿ ಪ್ರಕ್ರಿಯೆ ಸಾಧ್ಯವಿಲ್ಲದ ಕಾರಣ ಸಾರ್ವಜನಿಕರು ನೋಂದಣಿಗೆ ಇ-ಖಾತೆ ಇಲ್ಲದೇ ಅಡ್ಡಿ ಆಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಇ-ಖಾತೆಗೆ ಸಂಬಂಧಿಸಿದಂತೆ ಇರುವ ಅನುಮಾನಗಳು/ತೊಡಕುಗಳನ್ನು ನಿವಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಾರ್ವಜನಿಕರು, ಬಿಲ್ಡರ್‌ಗಳು ಹಾಗೂ ಡೆವಲರಪ್ಸ್ ಗಳಿಗೆ ತೊಡಕುಗಳು/ಅನುಮಾನಗಳನ್ನು ಬಗೆ ಹರಿಸಲು ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು, ಬಿಲ್ಡರ್ಸ್‌ಗಳು ಹಾಗೂ ಡೆವಲಪರ್ಸ್‌ಗಳು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಅಥವಾ ಅಹವಾಲುಗಳನ್ನು ನೀಡುವಂತೆ ಅವರು ಕೋರಿದ್ದಾರೆ.