ಶಿವಮೊಗ್ಗ: ಬೆಂಗಳೂರಿನ ನವರತ್ನ ಜ್ಯೂವೆಲ್ಲರಿ ಮಾಲೀಕರಿಗೆ ಕೋಟಿ ಕೋಟಿ ವಂಚಿಸಿದ ರೀತಿಯಲ್ಲೇ ಚಾಲಾಕಿ ಶ್ವೇತಾಗೌಡ ಅವರು, ಸಾಗರದ ಜ್ಯುವೆಲ್ಲರಿ ಅಂಗಡಿ ಮಾಲೀಕರಿಗೂ ಬಂಗಾರದ ಆಭರಣ ಪಡೆದು ಲಕ್ಷ ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಜ್ಯೂವೆಲ್ಲರಿ ಮಾಲೀಕರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಶ್ವೇತಾಗೌಡ ವಿರುದ್ಧ FIR ದಾಖಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸಾಗರದ ಪ್ರಗತಿ ಜ್ಯೂವೆಲ್ಲರ್ ಮಾಲೀಕ ಬಾಲರಾಜ್ ಶೇಟ್ ಅವರು, ಬೆಂಗಳೂರಿನ ನವರತ್ನ ಜ್ಯೂವೆಲ್ಲರ್ ಮಾಲೀಕರಾದಂತ ಸಂಜಯ್ ಬಾಪ್ನ ಅವರ ಮೂಲಕ ಶ್ವೇತಾಗೌಡ ಪರಿಚಯವಾಗಿತ್ತು. ಪರಿಚಯವಾದ 15 ದಿನಗಳ ನಂತ್ರ ಕಾಫಿ ಡೇನಲ್ಲಿ ಅವರನ್ನು ಭೇಟಿ ಮಾಡಲಾಗಿತ್ತು. ಆಗ 250 ಗ್ರಾಂ ಚಿನ್ನಾಭರಣ ಬೇಕು ಎಂಬುದಾಗಿ ಆರ್ಡರ್ ನೀಡಿದ್ದರು. ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿಸಿದರು.
ಬೆಂಗಳೂರಿಗೆ ಆರ್ಡರ್ ಒಂದು ಇದ್ದ ಕಾರಣ 285 ಗ್ರಾಂ ಆಭರಣಗಳೊಂದಿಗೆ ತನ್ನ ಸಹೋದರನನ್ನು ಕಳುಹಿಸಿ ಕೊಡಲಾಗಿತ್ತು. ಆದರೇ ಆ ಪಾರ್ಟಿ ಸಿಗದ ಕಾರಣ, ಶ್ವೇತಾಗೌಡಗೆ ವಾಟ್ಸಾಪ್ ಮಾಡಿ, ಹೀಗೆ ಆಭರಣಗಳಿರುವ ಬಗ್ಗೆ ಪೋಟೋ ಕಳುಹಿಸಿ ಕೊಟ್ಟಿದ್ದೆ. ಅವರು ನನ್ನ ತಮ್ಮನನ್ನು ಸಂಪರ್ಕಿಸಿ, ಆಭರಣಗಳನ್ನು ಪಡೆದಿದ್ದರು. ಅಲ್ಲದೇ 5 ಲಕ್ಷದ ಎರಡು ಚೆಕ್, 6 ಲಕ್ಷದ ಒಂದು ಚೆಕ್ ನೀಡಿದ್ದರು. ಬಾಕಿ ಮೊತ್ತ 4.75 ಲಕ್ಷ ನಾಳೆ ಆರ್ ಟಿ ಜಿ ಎಸ್ ಮಾಡುವುದಾಗಿ ಹೇಳಿ ಕಳುಹಿಸಿದ್ದರು ಎಂದರು.
ಒಂದೇ ದಿನ ಇದ್ದ ಕಾರಣ ಆರ್ ಟಿ ಜಿ ಎಸ್ ಮಾಡಬಹುದು ಅಂತ ಅಲ್ಲಿಂದ ನನ್ನ ತಮ್ಮ ಮರಳಿದ್ದನು. ಸಾಗರಕ್ಕೆ ಬಂದ ನಂತ್ರ ಚೆಕ್ ಗಳನ್ನು ಬ್ಯಾಂಕ್ ಗೆ ಕಲೆಕ್ಷನ್ ಗೆ ಹಾಕಲಾಗಿತ್ತು. ಆ ಚೆಕ್ ಗಳು ಬೌನ್ಸ್ ಆಗಿದ್ದವು. ಈ ಬಗ್ಗೆ ಶ್ವೇತಾಗೌಡ ಅವರನ್ನು ಸಂಪರ್ಕಿಸಿದಾಗ ನನ್ನ ಬ್ಯಾಂಕ್ ಸಮಸ್ಯೆ ಆಗಿದೆ. ಸರಿಯಾಗುತ್ತದೆ ಮತ್ತೆ ಹಾಕಿ ಅಂತ ತಿಳಿಸಿದ್ದರು. ಆದರೇ ಮತ್ತೊಂದು ಬಾರಿಯೂ ಚೆಕ್ ಬೌನ್ಸ್ ಆಯಿತು. ಮರಳಿ ಶ್ವೇತಾಗೌಡ ಸಂಪರ್ಕಿಸಲು ಯತ್ನಿಸಿದಾಗ ಅವರ ನಂಬರ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದರು.
ಶ್ವೇತಾಗೌಡ ಅವರನ್ನು ಪರಿಚಯಿಸಿದ್ದಂತ ಬೆಂಗಳೂರಿನ ನವರತ್ನ ಜ್ಯೂವೆಲ್ಲರ್ ಮಾಲೀಕ ಸಂಜಯ್ ಬಾಪ್ನ ಅವರನ್ನು ಸಂಪರ್ಕಿಸಿ ವಿಷಯ ಹೇಳಿದಾಗ ಅವರು ಕೂಡ ತನಗೆ ಕೋಟಿ ಕೋಟಿ ವಂಚಿಸಿದ್ದಾಗಿ, ತಾನು ದೂರು ನೀಡುವುದಾಗಿ ತಿಳಿಸಿದರು. ಆ ನಂತ್ರ ತಾನು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ತೆರಳಿ ಶ್ವೇತಾಗೌಡ ಅವರು ಆಭರಣ ಪಡೆದು ಹಣ ನೀಡದೇ ವಂಚಿಸಿದ್ದರ ಸಂಬಂಧ ದೂರು ನೀಡಿದ್ದೇನೆ. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ನನಗೆ ನ್ಯಾಯ ಕೊಡಿಸಿ, ಪಡೆದ ಚಿನ್ನಾಭರಣದ ಹಣವನ್ನು ಶ್ವೇತಾಗೌಡ ಅವರಿಂದ ಕೊಡಿಸುವಂತೆ ಮನವಿ ಮಾಡಿದರು.
ಸಾಗರದ ಪ್ರಗತಿ ಜ್ಯೂವೆಲ್ಲರ್ ಮಾಲೀಕ ಬಾಲರಾಜ್ ಶೇಟ್ ನೀಡಿದ ದೂರಿನಲ್ಲಿ ಏನಿದೆ.?
ದಿನಾಂಕ:18/12/2024 ರಂದು ಪಿರ್ಯಾದುದಾರರಾದ ಆರ್ ಬಾಲರಾಜ್ ಸೇಟ್, ಪ್ರಗತಿ ಜೂವೆಲರಿ ಶಾಪ್, ಸುಬಾಶ್ ನಗರ, ಶಿವಮೊಗ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಪಿರ್ಯಾದುದಾರರು ಪ್ರಗತಿ ಜೂವೆಲರಿ ಶಾಪ್ ನ ಮಾಲೀಕರಾಗಿದ್ದು, ಬೆಂಗಳೂರು ನಗರದಲ್ಲಿರುವ ನವರತ್ನ ಜೂವೆಲರಿ ಶಾಪ್ ನ ಮಾಲೀಕರಾದ ಸಂಜಯ್ ಬಪ್ಪ ಎಂಬುವವರ ಮೂಲಕ ಶ್ವೇತಾ ಎಂಬ ಮಹಿಳೆಯು ಸುಮಾರು ಆರು ತಿಂಗಳ ಹಿಂದೆ ಪರಿಚಯವಾಗಿದ್ದು, ನಂತರ 15 ದಿನಗಳ ಬಳಿಕ ಬೆಂಗಳೂರು ನಗರದ ಯುಬಿ ಸಿಟಿಯ ಬಳಿ ಇರುವ ಕಾಫಿ ಡೇಯಲ್ಲಿ ಬೇಟಿಯಾಗಿ ನಾನು ಸಂಜಯ್ ಬಳಿ ಕೋಟಿಗಟ್ಟಲೆ ವ್ಯವಹಾರ ಇದೆ, ನಾನು ಹಳೆಯ ಆಂಟಿಕ್ ಜ್ಯೂವೆಲರಿ ಖರೀದಿ ಮಾಡುತ್ತೇನೆ ಎಂದು ಹೇಳಿರುತ್ತಾಳೆ ಹಾಗೂ ವಜ್ರದ ಆಭರಣಗಳನ್ನು ಖರೀದಿ ಮಾಡುತ್ತೇನೆಂದು ಹೇಳಿ ಪಿರ್ಯಾದುದಾರರಿಗೆ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ತಯಾರು ಮಾಡಲು ಹೇಳಿರುತ್ತಾಳೆ.
ನಂತರ ಪಿರ್ಯಾದುದಾರರಿಗೆ ಯಾವುದೇ ಸಂಪರ್ಕ ಇರುವುದಿಲ್ಲ, ದಿನಾಂಕ: 11/12/2024 ರಂದು ಪಿರ್ಯಾದುದಾರರ ತಮ್ಮನಾದ ನಾಗರಾಜ್ 285 ಗ್ರಾಂ ತೂಕದ ಹಳೆಯ ಒಡವೆಗಳನ್ನು ವ್ಯಾಪಾರಕ್ಕಾಗಿ ಬೆಂಗಳುರಿಗೆ ಕಳಿಹಿಸಿಕೊಟ್ಟಿರುತ್ತೇನೆ, ಪಿರ್ಯಾದುದಾರರ ವ್ಯಾಪಾರಿ ಸಿಗದ ಕಾರಣ ಅವರಿಗೆ ಪರಿಚಯವಿರುವ ಶ್ವೇತಾಗೌಡ ರವರು ನೆನಪಾಗಿ ಅವರಿಗೆ ಪಿರ್ಯಾದುದಾರರು ವ್ಯಾಟ್ಸ್ ಆಪ್ ಮೂಲಕ ಆಭರಣಗಳ ಪೋಟೋವನ್ನು ಕಳುಹಿಸಿದ್ದು, ಆಗ ಶ್ವೇತಾಗೌಡ ರವರು ಈ ಒಡವೆಗಳು ನನಗೆ ಬೇಕು ಎಂದು ಉತ್ತರ ಕಳುಹಿಸಿರುತ್ತಾರೆ.
ಪಿರ್ಯಾದುದಾರರು ತಮ್ಮ ತಮ್ಮನಿಗೆ ಶ್ವೇತಾಗೌಡ ಪೋನ್ ನಂಬರ್ ಕೊಟ್ಟು ಬೇಟಿಯಾಗಲು ತಿಳಿಸಿರುತ್ತಾರೆ. ಅದೇ ದಿನ ರಾತ್ರಿ ಸುಮಾರು 08-30 ಗಂಟೆಯಿಂದ 08-45 ಗಂಟೆಯ ನಡುವೆ ಯುಬಿ ಸಿಟಿ ಬಳಿ ಇರುವ ಕಾಫೀ ಪಿರ್ಯಾದುದಾರರ ತಮ್ಮನನ್ನು ಕರೆಸಿಕೊಂಡು 285 ಗ್ರಾಂ ತೂಕದ 20,75,000/- ರೂ ಮೌಲ್ಯದ ಆಭರಣಗಳನ್ನು ಪಡೆದುಕೊಂಡು ನಾನು ಚೆಕ್ ಮೂಲಕವೆ ವ್ಯವಹಾರ ಮಾಡುವದಾಗಿ ಹೇಳಿ ಶ್ವೇತಾಗೌಡ ರವರು 5 ಲಕ್ಷದ 2 ಚೆಕ್ ಗಳನ್ನು ಮತ್ತು 6 ಲಕ್ಷದ 1 ಚೆಕ್ ಅನ್ನು ನೀಡಿ, ಉಳಿದ 4,75,000/-ರೂ ಹಣವನ್ನು ಮನೆಗೆ ಹೋಗಿ ಆ.ಟಿ.ಜಿ.ಎಸ್ ಮಾಡುವುದಾಗಿ ಹೇಳಿ ದಿನಾಂಕ:12/12/2024 ರಂದು ಚೆಕ್ ಗಳನ್ನು ಬ್ಯಾಂಕ್ ಗೆ ಜಮಾ ಮಾಡುವಂತೆ ಹೇಳಿ ಕಳುಹಿಸಿಕೊಟ್ಟಿರುತ್ತಾರೆ.
ಪಿರ್ಯಾದುದಾರರು ಬ್ಯಾಂಕ್ ಗೆ ಹೋಗಿ ಚೆಕ್ ಹಾಕಲಾಗಿ ದಿನಾಂಕ: 13/12/2024 ರಂದು ಚೆಕ್ ಗಳು ಅಮಾನ್ಯಗೊಂಡಿರುತ್ತವೆ. ಹಾಗೂ 4,75,000/-ರೂ ಹಣವನ್ನು ಕೂಡಾ ಆರ್.ಟಿ.ಜಿ.ಎಸ್ ಮಾಡಿರುವುದಿಲ್ಲ. ನಂತರ ಪಿರ್ಯಾದುದಾರರು ಶ್ವೇತಾಗೌಡ ರವರಿಗೆ ಕರೆ ಮಾಡಿ ವಿಚಾರಿಸಿದಾಗ ಬ್ಯಾಂಕ್ ನಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಹೇಳಿರುತ್ತಾರೆ. ನಂತರ ಶ್ವೇತಾಗೌಡ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಈ ಬಗ್ಗೆ ಪಿರ್ಯಾದುದಾರರಿಗೆ ಅನುಮಾನ ಬಂದು ಸಂಜಯ್ ರವರಿಗೆ ಕರೆ ಮಾಡಿದಾಗ ಸಂಜಯ್ ರವರು ನಾನು ಶ್ವೇತಾಗೌಡ ರವರ ವಿರುದ್ದ ದೂರು ನೀಡಿದು, ಅವರು ಠಾಣೆಯಲ್ಲಿ ಇರುವುದಾಗಿ ತಿಳಿಸಿರುತ್ತಾರೆ.
ಆದ್ದರಿಂದ ಪಿರ್ಯಾದುದಾರರಿಂದ ಹಳೆಯ ಬಂಗಾರದ ಒಡವೆಗಳನ್ನು ಪಡೆದುಕೊಂಡು ಹಣವನ್ನು ನೀಡದೆ, ಬಂಗಾರದ ಒಡವೆಗಳನ್ನು ಸಹ ವಾಪಸ್ ನೀಡದೆ ಮೋಸ ಮಾಡಿರುವ ಶ್ವೇತಾಗೌಡ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ಬಿಬಿಎಂಪಿಯಿಂದ ‘ಬ್ಲೂಗ್ರೀನ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನ
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ