ಬೆಂಗಳೂರು: ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು, ಹಲ್ಲೆ ಮಾಡುವ ಪ್ರಯತ್ನ ನಡೆದಿದ್ದು ಇದು ಸಣ್ಣ ಘಟನೆಯಲ್ಲ; ಅವರ ಮೇಲೆ ಒತ್ತಡ ಹಾಕಿ ಅವರು ರಾಜೀನಾಮೆ ಕೊಡಬೇಕು. ಮರುಚುನಾವಣೆ ಆಗಿ ಬೇಕಾದವರನ್ನು ಗೆಲ್ಲಿಸಬೇಕೆಂಬ ಷಡ್ಯಂತ್ರ ಇದರ ಹಿಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಶಾಸಕ ಹರೀಶ್ ಪೂಂಜ ಅವರ ಮೇಲೆ ಸಹ ಬೋಗಸ್ ಕೇಸನ್ನು ಹಾಕಿ ಅವರನ್ನು ಬಂಧಿಸಲು ಯತ್ನಿಸಿದ್ದರು. ಮೊನ್ನೆ ಸಿ.ಟಿ.ರವಿ ಅವರ ಪ್ರಕರಣದಲ್ಲಿ ಸದನದ ಹೊರಗಡೆ ಜನಪ್ರತಿನಿಧಿಯನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ; ಪೊಲೀಸರ ದುರ್ಬಳಕೆಯನ್ನು ನೋಡಿದ್ದೀರಿ. ಇದ್ಯಾವುದು ಕೂಡ ಸರಕಾರದ ಕುಮ್ಮಕ್ಕಿನಿಂದ ಆಗುತ್ತದೆಯೇ ವಿನಾ, ಸರಕಾರ ಅಥವಾ ಸಚಿವರ ಹಸ್ತಕ್ಷೇಪ ಇಲ್ಲದೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುನಿರತ್ನ ಅವರ ಜೊತೆಗಿರುವ ಕಾರ್ಯಕರ್ತರು, ಮುಖಂಡರು ನೊಂದುಕೊಂಡಿದ್ದಾರೆ. ಅವರ ಮೇಲೂ ಸುಳ್ಳು ಕೇಸು ದಾಖಲಿಸಲಾಗುತ್ತಿದೆ. ಹಳೆ ಕೇಸುಗಳನ್ನು ರೀ ಓಪನ್ ಮಾಡುತ್ತಿದ್ದಾರೆ. ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಬಿಯರ್ ಬಾಟಲ್ ಒಡೆದು ಹಾಕಿ ಮನೆಯಲ್ಲಿರುವ ಹೆಣ್ಮಕ್ಕಳಿಗೆ ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಪುಡಾರಿಗಳು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ. ಶಾಸಕರ ಮೇಲೆ ಒತ್ತಡ, ಬೆದರಿಕೆ ತಂತ್ರ ಸಣ್ಣ ಘಟನೆಯೇನಲ್ಲ ಎಂದು ವಿಶ್ಲೇಷಿಸಿದರು. ಒತ್ತಡ ಹಾಕುವ ಕಾಂಗ್ರೆಸ್ ಪುಡಾರಿಗಳು, ಮುಖಂಡರು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಮುನಿರತ್ನ ಅವರ ವಿರುದ್ಧ ಇರುವ ಆರೋಪಗಳ ತನಿಖೆ ಆಗುತ್ತಿದೆ; ತನಿಖೆ ಆಗಲಿ. ಅದರ ಬಗ್ಗೆ ನಮ್ಮ ವಿರೋಧವಿಲ್ಲ; ಸತ್ಯ ಏನಿದೆಯೋ ಹೊರಗಡೆ ಬರುತ್ತದೆ. ಆದರೆ, ಅದನ್ನು ನೆಪವೊಡ್ಡಿ ಈ ರೀತಿ ದೌರ್ಜನ್ಯ ಮಾಡುವುದು ಖಂಡಿತವಾಗಿ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಜನಪ್ರತಿನಿಧಿಗಳನ್ನು ಬೆದರಿಸುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ಮುನಿರತ್ನ ಅವರ ಗನ್‍ಮ್ಯಾನ್ ಅನ್ನೂ ಹಿಂಪಡೆದಿದ್ದಾರೆ. ಅವರು ಹಾಗಿದ್ದರೆ ಶಾಸಕರಲ್ಲವೇ; ಅವರು ಜನಪ್ರತಿನಿಧಿಯಲ್ಲವೇ ಎಂದು ಕೇಳಿದರು. ಅವರ ಗನ್‍ಮ್ಯಾನ್ ಅನ್ನು ಹಿಂದಕ್ಕೆ ಪಡೆದಿದ್ದೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.