ಮೈಸೂರು : ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟು ಮರುನಾಮಕರಣ ಮಾಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಎರಡು ಬಾರಿ ಸಿಎಂ ಆಗಿದ್ದಾರೆ. ಮೈಸೂರಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಅವರ ಹೆಸರಿಡುವುದು ತಪ್ಪಲ್ಲ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಮಾಡಬಾರದು. ಇದಕ್ಕೆ ವಿರೋಧ ಮಾಡುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಸಿ.ಟಿ. ರವಿ ಅವರನ್ನು ಮುಗಿಸುವ ಯತ್ನ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಇಂತಹ ಕೆಲಸಗಳಿಗೆ ಅವಕಾಶ ನೀಡಬಾರದು. ಸದನದಲ್ಲಿ ನಡೆದ ಘಟನೆ ಬಗ್ಗೆ ಸಭಾಪತಿ ನಿರ್ಧಾರ ಕೈಗೊಳ್ಳಬೇಕು. ಸದನದಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯ ಕೇಳುವುದು ತಪ್ಪಲ್ಲ. ಸದನದಲ್ಲಿ ಸಮಸ್ಯೆಗೆ ಸ್ಪೀಕರ್ ಬಳಿ ದೂರು ನೀಡಬೇಕು. ಆಣೆ ಪ್ರಮಾಣ ಬಗ್ಗೆ ಮಾತನಾಡುವುದಲ್ಲ. ಯಾರ ಯಾರ ಯೋಗ್ಯತೆ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.