ಬೆಂಗಳೂರು: ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕರಾಗಿ ವೈಫಲ್ಯಗಳನ್ನು ಕಂಡಿರುವ ಜೋಡೆತ್ತುಗಳು ಆರ್.ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿ ರಾಜ್ಯದ ಜನರಿಗೆ ತಮ್ಮ ಹೇಳಿಕೆಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹೇಳಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕದ ಇಬ್ಬರು ಬಿಜೆಪಿ ವಿರೋಧ ಪಕ್ಷದ ನಾಯಕರು ತಮ್ಮ ವ್ಯರ್ಥ ಪ್ರಲಾಪಗಳಿಂದ ರಾಜ್ಯದ ಜನರ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಯಾವುದೇ ಜನಪರ ವಿಷಯಗಳ ಮೇಲೆ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ವಿಫಲರಾಗಿದ್ದು, ಇವತ್ತು ರಾಜ್ಯಪಾಲರನ್ನು ಭೇಟಿಯಾಗುವುದರ ಮೂಲಕ ಅವರ ನಿಜ ಬಣ್ಣವನ್ನು ಬಯಲು ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಬೌದ್ಧಿಕವಾಗಿ ದಿವಾಳಿಯಾಗಿರುವ ಇವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ದುರ್ಬಲ ದೌರ್ಬಲ್ಯದ ವಿರೋಧ ಪಕ್ಷದ ನಾಯಕರನ್ನು ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಮತ್ತು ಮುಖ್ಯಮಂತ್ರಿಗಳನ್ನು ಟೀಕಿಸುವ ಒಂದೇ ಕಾರಣಕ್ಕೆ ರಾಜ್ಯ ಬಿಜೆಪಿಯಿಂದ ವಿಧಾನಪರಿಷತ್ತಿನ ಸ್ಥಾನ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಳುವಳಿಯಾಗಿ ಪಡೆದಿರುವ ಛಲವಾದಿ ನಾರಾಯಣಸ್ವಾಮಿ ರವರು ಕರ್ನಾಟಕದ ಬೆಳಗಾವಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ ಕುರಿತು ಟೀಕೆಯನ್ನು ಮುಂದುವರಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲವನ್ನೂ ಉಂಡು ಬಿಜೆಪಿ ಹೊಕ್ಕಿರುವ ಇವರು, ಅವರ ನಾಯಕರ ಅಣತಿಯ ಪಾಲನೆಗಾಗಿ ಸ್ವಾಭಿಮಾನ ಬಿಟ್ಟು ತಲೆಯ ಮೇಲೆ ಚಡ್ಡಿ ಹೊತ್ತ ಘಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ರವರ ಸ್ವಾಭಿಮಾನದ ಗಂಧವೇ ತಿಳಿಯದ ಅವಕಾಶವಾದಿಗಳು ಅಂಬೇಡ್ಕರ್ ಬಗ್ಗೆ ಕೂಗು ಹಾಕುವುದು ಒಂದು ಅಪಹಾಸ್ಯ ಎಂಬುದಾಗಿ ಕಿಡಿಕಾರಿದ್ದಾರೆ.
ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂ ಧರ್ಮದಲ್ಲಿ ನಾನು ಸಾವನ್ನು ಬಯಸುವುದಿಲ್ಲ ಎಂದು ಬೇರೆ ಧರ್ಮವನ್ನು ಸ್ವೀಕರಿಸಿದ ಅಂಬೇಡ್ಕರ್ ಅವರ ಕುರಿತು ಬಿಜೆಪಿಯ ನಾಯಕರಿಗೆ ಆಗಾಗ ಅತಿಯಾದ ಪ್ರೀತಿ ಹುಟ್ಟುತ್ತದೆ. ಅವರ ವಿಚಾರಗಳನ್ನು ಎಂದೂ ಒಪ್ಪದ ಬಿಜೆಪಿ ನಾಯಕರು, ಅವರ ಆದರ್ಶಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಸಮಯ ಸಾಧಕರು, ಸಂವಿಧಾನವನ್ನು ಬುಡಮೇಲು ಮಾಡುವ ಹಿಡನ್ ಅಜೆಂಡಾ ನಾಯಕರು ಇಂದು ಅವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹಿಂಧು ಧರ್ಮದಲ್ಲಿ ಇದ್ದಂತಹ ಅನೇಕ ತಪ್ಪುಗಳನ್ನು ಬೆತ್ತಲೆ ಗೊಳಿಸಿದ ಏಕೈಕ ನಾಯಕ ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸನ್ಮಾನ್ಯ ಅಂಬೇಡ್ಕರ್ ಅವರ ವಿರುದ್ಧ ವ್ಯವಸ್ಥಿತವಾಗಿ ಅಂದಿನ ಜನಸಂಘದ ಅಭ್ಯರ್ಥಿಯನ್ನು ನಿಲ್ಲಿಸಿ ಅವರ ಸೋಲಿಗೆ ಕಾರಣರಾದಂತ ಬಿಜೆಪಿ ನಾಯಕರು, ಅಂಬೇಡ್ಕರ್ ಅವರ ಕುರಿತು ಕಾಂಗ್ರೆಸ್ಗೆ ಪಾಠ ಹೇಳಲು ಹೊರಟಿದ್ದಾರೆ. ಅಮಿತ್ ಶಾ ರವರು ಇಡೀ ದೇಶ ತಲೆತಗ್ಗಿಸುವ ರೀತಿಯಲ್ಲಿ ಅಂಬೇಡ್ಕರ್ ಅವರನ್ನು ಟೀಕಿಸಿ ಅವರ ಹೆಸರಿಗೆ ಮಸಿಬಳಿಯವ ಪ್ರಯತ್ನವನ್ನು ಮಾಡಿರುತ್ತಾರೆ. ಈ ದಿನ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟಂತಹ ದಿನವಾಗಿದ್ದು, ಅದರ ಸಾಂಕೇತಿಕ ಪ್ರತಿಭಟನೆಯನ್ನು ರಾಜ್ಯ ಮತ್ತು ರಾಷ್ಟ್ರದ ಉದ್ದಗಲಕ್ಕೂ ಪ್ರಗತಿಪರ ಸಂಘಟನೆಗಳು ಮಾಡಿದ್ದು, ಇದನ್ನು ಟೀಕಿಸಿರುವುದು ಛಲವಾದಿ ನಾರಾಯಣಸ್ವಾಮಿ ರವರ ಭಟ್ಟಂಗಿತನದ ಪರಮಾವಧಿ ಆಗಿರುತ್ತದೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಇಂತಹ ಹೇಳಿಕೆಗಳನ್ನು ಇವರು ನೀಡುತ್ತಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಯಾವತ್ತು ಸಹ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸದ ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಒಪ್ಪದ ಭಾರತೀಯ ಜನತಾ ಪಕ್ಷ, ಅವರು ಮನುಸ್ಮೃತಿಯನ್ನು ಏತಕ್ಕೆ ಸುಟ್ಟರೆಂಬುದನ್ನು ಬಹಿರಂಗಗೊಳಿಸಲಿ. ಅದನ್ನು ಬಿಟ್ಟು ಇಂತಹ ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಸಾರ್ವಜನಿಕವಾಗಿ ನಗೆ ಪಾಟಲಿಗೆ ಈಡಾಗುವುದನ್ನು ಬಿಜೆಪಿ ನಾಯಕರು ನಿಲ್ಲಿಸಲಿ ಎಂಬುದಾಗಿ ಆಗ್ರಹಿಸಿದ್ದಾರೆ.
ತಮ್ಮ ವಿರೋಧ ಪಕ್ಷದ ನಾಯಕ ಸ್ಥಾನದ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ವ್ಯರ್ಥ ಪ್ರಯತ್ನಗಳಿಗೆ ಮುಂದಾಗಿರುತ್ತಾರೆ. ಇವರ ಇಂತಹ ಟೀಕೆಗಳನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕರಾಗಿ ವೈಫಲ್ಯಗಳನ್ನು ಕಂಡಿರುವ ಜೋಡೆತ್ತುಗಳು ಆರ್.ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿ ರಾಜ್ಯದ ಜನರಿಗೆ ತಮ್ಮ ಹೇಳಿಕೆಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ.
ಡಿ.29ರಂದು 384 KAS ಹುದ್ದೆಗಳಿಗೆ ಪೂರ್ವಭಾವಿ ಮರುಪರೀಕ್ಷೆ: ಅಭ್ಯರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯ
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ
ಜಗತ್ತಿನಲ್ಲಿ ಎಷ್ಟು ಸಾಲವಿದೆ.? ಯಾವ ದೇಶದ್ದು ಎಷ್ಟು.? ಭಾರತ ತೆಗೆದುಕೊಂಡದೆಷ್ಟು.? ಆಘಾತಕಾರಿ ವರದಿ ಬಹಿರಂಗ