ಬೆಂಗಳೂರು: KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸ 20 ಅಂಬಾರಿ ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂಬಾರಿ ಉತ್ಸವ್ ಸ್ಲೀಪರ್ ಬಸ್ಸುಗಳು ರಸ್ತೆ ಇಳಿಯಲಿದ್ದಾವೆ.
ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಗಮದ 20 ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು, ದಿನೇಶ್ ಗುಂಡುರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಎಸ್. ಆರ್. ಶ್ರೀನಿವಾಸ್ (ವಾಸು), ಅಧ್ಯಕ್ಷರು ಹಾಗೂ ಶಾಸಕರು ಗುಬ್ಬಿ ವಿಧಾನಸಭಾ ಕ್ಷೇತ್ರ ಮತ್ತು ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಕರಾರಸಾ ನಿಗಮರವರು ಚಾಲನೆ ನೀಡಿದರು.
ಕರಾರಸಾ ನಿಗಮದ ಹುಮ್ನಾಬಾದ್ ತರಬೇತಿ ಕೇಂದ್ರದಲ್ಲಿ ನಡೆಸದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ 1406 ಅಭ್ಯರ್ಥಿಗಳ ಪೈಕಿ 50 ಅಂಕಗಳಿಗೆ 50/49/48 ಅಂಕ ಪಡೆದಿರುವ 82 ಅಭ್ಯರ್ಥಿಗಳಿಗೆ ಪೈಕಿ 14 ಮಂದಿಗೆ ಚಾಲಕ ಕಂ ನಿರ್ವಾಹಕರ ಹುದ್ದೆಗೆ ತಾತ್ಕಾಲಿಕ ನಿಯೋಜನೆ ಆದೇಶ ವಿತರಣೆ ಮಾಡಿದರು.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8896 ವಾಹನಗಳ ಮೂಲಕ 8063 ಅನುಸೂಚಿಗಳಿಂದ 28.76 ಲಕ್ಷ ಕಿ.ಮೀ ಕ್ರಮಿಸಿ 35.43 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ.
- ನಮ್ಮ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದುವರೆ ವರ್ಷದಲ್ಲಿ 4301 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ.
- ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ನಮ್ಮ ಸರ್ಕಾರವು ಅನುಮತಿ ನೀಡಿದ್ದು, ಈ ಪೈಕಿ 2144, ಚಾಲಕ ಕಂ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6856 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು.
- ಶಕ್ತಿ ಯೋಜನೆ ನಿಗಮಗಳ ವಾಹನಗಳಲ್ಲಿ 356.00 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ ರೂ. 8598.23 ಕೋಟಿಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.37 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಮುನ್ನ ನಾಲ್ಕು ನಿಗಮಗಳ ವಾಹನಗಳಲ್ಲಿ ಸರಾಸರಿ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಸ್ತುತ ಈ ಸಂಖ್ಯೆಯು 108.70 ಲಕ್ಷಗಳಿಗೆ ಹೆಚ್ಚಳವಾಗಿರುತ್ತದೆ.
- ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1004 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ.
- ಸಾರಿಗೆ ಸುರಕ್ಷಾ ಅಪಘಾತ ಪರಿಹಾರ ವಿಮಾ ಯೋಜನೆ: ಅಪಘಾತದಿಂದ ಮೃತಪಟ್ಟ 22 ಸಿಬ್ಬಂದಿಗಳ ಅವಲಂಭಿತರಿಗೆ ತಲಾ ರೂ. 1 ಕೋಟಿಯಂತೆ ಇದುವರೆಗೆ ರೂ.22 ಕೋಟಿಗಳ ಪರಿಹಾರ ನೀಡಲಾಗಿದೆ.
- ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ತಲಾ ರೂ.10 ಲಕ್ಷಗಳಂತೆ 81 ಸಿಬ್ಬಂದಿಗಳ ಅವಲಂಭಿತರಿಗೆ ರೂ. 8.10 ಕೋಟಿಗಳ ಪರಿಹಾರ ವಿತರಿಸಲಾಗಿದೆ.
- ಸಾರಿಗೆ ವಿದ್ಯಾ ಚೇತನʼ: ಕ.ರಾ.ರ.ಸಾ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾ ಸಹಾಯ ನಿಧಿ ಅಡಿಯಲ್ಲಿ ʼಸಾರಿಗೆ ವಿದ್ಯಾ ಚೇತನʼ ಯೋಜನೆಯಡಿ ಜಾರಿಗೊಳಿಸಿದ್ದು, ಈವರೆಗೂ 6083 ಫಲಾನುಭವಿಗಳಿಗೆ ರೂ. 3.05 ಕೋಟಿ ಸ್ಕಾಲರ್‌ಶಿಪ್ ನೀಡಲಾಗಿದೆ.
- ನಿಗಮಕ್ಕೆ ಲಭಿಸಿರುವ ಪ್ರಶಸ್ತಿಗಳು: ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 112 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುತ್ತದೆ.
ಕೆಎಸ್‌ಆರ್‌ಟಿಸಿ ಗೆ 20 ನೂತನ ವೋಲ್ವೋ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ಚಾಲನೆ. ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
ಹೀಗಿದೆ 20 ನೂತನ ವೋಲ್ವೋ ಅಂಬಾರಿ ಉತ್ಸವ್ ಸ್ಲೀಪರ್ ಬಸ್ ಸಂಚಾರದ ಮಾರ್ಗಗಳ ಪಟ್ಟಿ
ಕುಂದಾಪುರ – ಬೆಂಗಳೂರು -2
ಮಂಗಳೂರು – ಬೆಂಗಳೂರು -2
ಕೆಂಪೇಗೌಡ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣ – ಕುಂದಾಪುರ -2
ಬೆಂಗಳೂರು – ನೆಲ್ಲೂರು -2
ಬೆಂಗಳೂರು – ಹೈದಾರಬಾದ್ -2
ಬೆಂಗಳೂರು – ವಿಜಯವಾಡ- 4
ಬೆಂಗಳೂರು – ಎರ್ನಾಕುಲಂ – 2
ಬೆಂಗಳೂರು – ತ್ರಿಶೂರು – 2
ಬೆಂಗಳೂರು – ಕ್ಯಾಲಿಕಟ್ -2
ಹೀಗಿದೆ ವಾಹನಗಳ ವಿಶೇಷತೆ
- ಈ ವಾಹನವು 15 ಮೀಟರ್ ಉದ್ದವಿದ್ದು, 40 ಬರ್ತ್ 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.
- ಇದು ಶಕ್ತಿಯುತ ಹಾಲೋಜನ್ ಹೆಡ್ ಲೈಟ್ಗಳು ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಗಳನ್ನು (DRL) ಹೊಂದಿರುತ್ತದೆ.
- ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ.
- ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
- ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು 9.5% ಅಗಲವಾಗಿದೆ.
- ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳನ್ನು, ಯು.ಎಸ್.ಬಿ ಮತ್ತು C-ಟೈಪ್, ಹೊಂದಿಸಲಾಗಿದೆ.
- ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಅನುಕೂಲವನ್ನು ಒದಗಿಸುತ್ತದೆ.
- ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.
- ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟುಗಳು. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್ಚುಗಳನ್ನು ಹೊಂದಿವೆ.
- ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FDSS) ಸ್ಥಾಪಿಸಲಾಗಿದೆ.
- ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.
ಈ ಸಮಾರಂಭದಲ್ಲಿ ವಿ. ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ಆರ್. ರಾಮಚಂದ್ರನ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕರಾರಸಾ ನಿಗಮ, ಕಾರ್ಮಿಕ ಸಂಘಟನೆಗಳ ಮುಖಂಡರು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿವಸ್ತ್ರಗೊಳಿಸಿ, ಥಳಿಸಿ, ಮೂತ್ರ ವಿಸರ್ಜನೆ: ದಲಿತ ಯುವಕ ಆತ್ಮಹತ್ಯೆ | Dalit Teen