ನವದೆಹಲಿ : ವಿವಾಹಿತ ಮಹಿಳೆಯರಿಗಾಗಿ ಛತ್ತೀಸ್‌ಗಢ ಸರ್ಕಾರದ ಯೋಜನೆಯಲ್ಲಿ ವಂಚನೆಯ ಆಘಾತಕಾರಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಖಾತೆಯನ್ನು ತೆರೆದು ಪ್ರತಿ ತಿಂಗಳು 1,000 ರೂ. ಪಡೆಯುತ್ತಿದ್ದ ಘಟನೆ ನಡೆದಿದೆ.
ಛತ್ತೀಸ್ ಗಢ ಬಿಜೆಪಿ ಸರ್ಕಾರದ ಮಹತಾರಿ ವಂದನ್ ಯೋಜನೆ ಅಡಿಯಲ್ಲಿ, ಛತ್ತೀಸ್‌ಗಢದಲ್ಲಿ ವಿವಾಹಿತ ಮಹಿಳೆಯರು ಪ್ರತಿ ತಿಂಗಳು ತಮ್ಮ ಖಾತೆಗಳಿಗೆ 1,000 ರೂ. ಮೊತ್ತ ಜಮಾ ಆಗುತ್ತಿದ್ದ ಖಾತೆಗಳಲ್ಲೊಂದು ಸನ್ನಿ ಲಿಯೋನ್ ಹೆಸರಲ್ಲಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಖಾತೆಯನ್ನು ತೆರೆದು ನಿರ್ವಹಿಸಿದ ವ್ಯಕ್ತಿಯನ್ನು ವೀರೇಂದ್ರ ಜೋಶಿ ಎಂದು ಗುರುತಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯೋಜನೆಯ ಅರ್ಹ ಫಲಾನುಭವಿಗಳ ಪರಿಶೀಲನೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ಸಹ ಗುರುತಿಸಲಾಗುತ್ತಿದೆ.
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ತಾಲೂರ್ ಗ್ರಾಮದಲ್ಲಿ ವಂಚನೆ ವರದಿಯಾಗಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸಿ ಬ್ಯಾಂಕ್ ಖಾತೆಯನ್ನು ವಸೂಲಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಧಿಕಾರಿ ಹಾರಿಸ್ ಸೂಚನೆ ನೀಡಿದ್ದಾರೆ. ಮಹತಾರಿ ವಂದನ್ ಯೋಜನೆಯಡಿ ಶೇಕಡಾ 50 ರಷ್ಟು ಫಲಾನುಭವಿಗಳು ನಕಲಿಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಆರೋಪಿಸಿದ್ದಾರೆ. ಕಾಂಗ್ರೆಸ್ ತನ್ನ ಹಿಂದಿನ ಅವಧಿಯಲ್ಲಿ ನೀಡಲಾಗದ ಮಾಸಿಕ ಸಹಾಯವನ್ನು ಈಗ ರಾಜ್ಯದ ಮಹಿಳೆಯರು ಪಡೆಯುತ್ತಿರುವುದರಿಂದ ಕಾಂಗ್ರೆಸ್‌ಗೆ ನೋವಾಗಿದೆ ಎಂದು ಉಪಮುಖ್ಯಮಂತ್ರಿ ಅರುಣ್ ಸಾವೋ ತಿರುಗೇಟು ನೀಡಿದರು.