ಮಂಡ್ಯ : ಫೆ.2 ರಂದು ನಿಗಧಿಯಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಗೆ ಮದ್ದೂರು ತಾಲೂಕಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಜೆಪಿ ಮುಖಂಡ ಹಾಗೂ ಹಾಲಿ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಭಾನುವಾರ ಬೆಳಿಗ್ಗೆ ಕೇಂದ್ರ ಸಚಿವ ಹಾಗೂ ಮಂಡ್ಯ ಕ್ಷೇತ್ರದ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದ್ದಾರೆ.
ಬಿಡದಿ ಬಳಿಯ ಕುಮಾರಸ್ವಾಮಿ ಅವರ ತೋಟದ ಮನೆಗೆ ಭಾನುವಾರ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿದ ಅವರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಕೆಲಕಾಲ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಬಳಿಕ, ಎಸ್.ಪಿ.ಸ್ವಾಮಿ ಮನವಿಗೆ ಹೆಚ್.ಡಿ.ಕೆ ಸಕಾರಾತ್ಮಕ ಸ್ಪಂದಿಸಿದ್ದು, ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಕದನ ಈಗಾಗಲೇ ರಂಗೇರಿದ್ದು, ಕಲಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮದ್ದೂರು ತಾಲೂಕಿನಿಂದ 5 ಮಂದಿ ಪ್ರಭಾವಿ ವ್ಯಕ್ತಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಕದಲೂರು ರಾಮಕೃಷ್ಣ, ಮಾರಸಿಗನಹಳ್ಳಿ ಹರೀಶ್ ಹಾಗೂ ಜೆಡಿಎಸ್ ಪಕ್ಷದಿಂದ ಪುರಸಭಾ ಸದಸ್ಯ ಎಸ್.ಮಹೇಶ್ ಮತ್ತು ಬಿಜೆಪಿ ಪಕ್ಷದಿಂದ ಹಾಲಿ ನಿರ್ದೇಶಕರಾದ ಎಸ್.ಪಿ.ಸ್ವಾಮಿ ಹಾಗೂ ಕು.ರೂಪ ಮತ್ತೋಮ್ಮೆ ಕದನಕ್ಕಿಳಿದಿದ್ದು, ನೇರಾನೇರ ಪೈಪೋಟಿ ಕಂಡುಬಂದಿದೆ.
ಮದ್ದೂರು ತಾಲೂಕಿನಿಂದ ಎರಡು ನಿರ್ದೇಶಕ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದ್ದು, 5 ಮಂದಿ ಕಣದಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ಬಾರಿ ಜೆಡಿಎಸ್ ಶಾಸಕರಿದ್ದರೂ ಸಹ ಎರಡು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಎಸ್.ಪಿ.ಸ್ವಾಮಿ ಹಾಗೂ ಕು.ರೂಪ ಜಯಶೀಲರಾಗಿದ್ದರು. ಆದರೆ, ಈ ಬಾರಿ ಎರಡು ಸ್ಥಾನಗಳನ್ನು ಕೈ ತೆಕ್ಕೆಗೆ ತೆಗೆದುಕೊಳ್ಳಲು ಶಾಸಕ ಕೆ.ಎಂ.ಉದಯ್ ಟೊಂಕಕಟ್ಟಿ ನಿಂತಿದ್ದು, ಈಗಾಗಲೇ ಕ್ಷೇತ್ರದ ಜಿ.ಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.
ಇನ್ನು ಲೋಕಸಭಾ ಚುನಾವಣೆ ಬಿಟ್ಟು ಎಲ್ಲಾ ಚುನಾವಣೆಗಳಲ್ಲಿ ಸತತ ಸೋಲುಂಡಿರುವ ಮೈತ್ರಿ ನಾಯಕರು. ಹೀಗಾಗಿ ಈ ಬಾರಿ ಎರಡು ಸ್ಥಾನಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ರೂಪಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ
‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ: ದಿಗ್ವಿಜಯ್ ಸಿಂಗ್