ಗಾಝಾ: ಮಧ್ಯ ಮತ್ತು ಉತ್ತರ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 18 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ
ಮಧ್ಯ ಗಾಝಾದಲ್ಲಿರುವ ಅಲ್-ನುಸೆರಾತ್ ಶಿಬಿರದ ಬಹುಮಹಡಿ “ಯಾಫಾ” ಗೋಪುರದಲ್ಲಿರುವ ಅಪಾರ್ಟ್ಮೆಂಟ್ ಅನ್ನು ಇಸ್ರೇಲ್ ಯುದ್ಧ ವಿಮಾನಗಳು ಗುರಿಯಾಗಿಸಿಕೊಂಡಿವೆ ಎಂದು ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಶಿಬಿರದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ ಎಂದು ಶಿಬಿರದ ಅಲ್-ಅವ್ದಾ ಆಸ್ಪತ್ರೆಯ ಹೇಳಿಕೆ ದೃಢಪಡಿಸಿದೆ.
ಉತ್ತರ ಗಾಝಾದಲ್ಲಿ, ಜಬಾಲಿಯಾ ಅಲ್-ಬಲದ್ನಲ್ಲಿರುವ “ಖಿಲ್ಲಾ” ಕುಟುಂಬಕ್ಕೆ ಸೇರಿದ ಮನೆಯ ಮೇಲೆ ಇಸ್ರೇಲ್ ಶೆಲ್ ದಾಳಿ ನಡೆಸಿದ್ದು, 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಗಾಝಾ ಪಟ್ಟಿಯ ಸಿವಿಲ್ ಡಿಫೆನ್ಸ್ ತಿಳಿಸಿದೆ.
ಈ ಘಟನೆಗಳ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಆರು ಸೈನಿಕರ ಇಸ್ರೇಲಿ ಪಡೆಯನ್ನು ಗುರಿಯಾಗಿಸಿಕೊಂಡು ತನ್ನ ಹೋರಾಟಗಾರರಲ್ಲಿ ಒಬ್ಬರು ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ಹಮಾಸ್ನ ಮಿಲಿಟರಿ ವಿಭಾಗವಾದ ಅಲ್-ಖಾಸ್ಸಾಮ್ ಬ್ರಿಗೇಡ್ಸ್ ಶುಕ್ರವಾರ ಪ್ರಕಟಿಸಿದೆ.
ಈ ಘಟನೆಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದಕ್ಕೂ ಮುನ್ನ ಗುರುವಾರ ಉತ್ತರ ಗಾಝಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 16 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ