ಬೆಂಗಳೂರು : ರಾಜ್ಯದಲ್ಲಿ ನಕಲಿ ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದ್ದು, ರಾಜ್ಯಾದ್ಯಂತ 91,061 ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
ಹೌದು, ಮಾನದಂಡ ಉಲ್ಲಂಘಿಸಿ ಪಡೆದ 91,061 ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ. ಆದಾಯ ತೆರಿಗೆ ಪಾವತಿದಾರರು, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚಿರುವವರುಉ, ಸರ್ಕಾರಿ ನೌಕರರು, ಮೃತ ಫಲಾನುಭವಿಗಳು ಹಾಗೂ 6 ತಿಂಗಳಿನಿಂದ ಪಡಿತರ ಪಡೆಯದ ಕಾರ್ಡ್ ಗಳನ್ನು ಗುರುತಿಸಿ ಆಹಾರ ಇಲಾಖೆ 2023-24ರಲ್ಲಿ 74,342 ಹಾಗೂ 2024 ರಲ್ಲಿ 16,719 ಕಾರ್ಡ್ ಗಳನ್ನು ರದ್ದುಮಾಡಿದೆ.
ರಾಜ್ಯದಲ್ಲಿ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಿಸ್ಟಂ ಮಾಹಿತಿ ಆಧರಿಸಿ 5 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.
ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಮಂದಿ 1.20 ಲಕ್ಷ ರೂ.ಗಳ ಅಧಿಕ ಆದಾಯ ಹೊರಂದಿರುವವರು, 4,036 ಮಂದಿ ಸರ್ಕಾರಿ ನೌಕರರಿರುವುದು ಪತ್ತೆಯಾಗಿದೆ. ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ.