ಬೆಂಗಳೂರು : 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ಸಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಡಿಸೆಂಬರ್ 31 ರವರೆಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಲ್ಲಿ 2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು.
ಮೇಲೆ ಓದಲಾದ ಕ್ರ.ಸಂ. (2) ರ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ (Flagship) ವಿಶಿಷ್ಟ ಯೋಜನೆಯಾಗಿದ್ದು, ಇದರಲ್ಲಿ ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿ ಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5.00 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ.
ಯಶಸ್ಸಿನಿ ಯೋಜನೆಯು ವಿಮಾ ಯೋಜನೆಯಾಗಿರುವುದಿಲ್ಲ. ಬದಲಾಗಿ ಇದೊಂದು ಸ್ವಯಂ ನಿಧಿ ಸಹಕಾರ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆ (CO-operative Society Members Health Assurance Scheme)ಯೋಜನೆಯಾಗಿದ್ದು, ಸಹಕಾರ ಸಂಘಗಳ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಅನುದಾನ ಒದಗಿಸುವ ಮೂಲಕ ಯೋಜನೆಯಲ್ಲಿ ಭಾಗವಹಿಸುತ್ತದೆ. ಯಶಸ್ವಿನಿ ಯೋಜನೆಯನ್ನು 2024-25ನೇ ಸಾಲಿಗೂ ಮುಂದುವರೆಸಲು ಅನುವಾಗುವಂತೆ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಯೋಜನೆಯ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, “ಯಶಸ್ಸಿನಿ” ಯೋಜನೆಯನ್ನು 2024-25ನೇ ಸಾಲಿನಲ್ಲಿ ಮುಂದುವರೆಸಿ ಜಾರಿಗೊಳಿಸಲು ಈ ಕೆಳಕಂಡ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸುವಂತೆ ನಿಬಂಧಕರು ಕೋರಿರುತ್ತಾರೆ.
ಯೋಜನೆಯ ಮಾರ್ಗಸೂಚಿಗಳು
ಯಾವುದೇ ಸಹಕಾರ ಸಂಘಗಳ ಕಾಯ್ದೆಗಳಡಿ (ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997 ಅಥವಾ ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002) ನೋಂದಾಯಿಸಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘ / ಬ್ಯಾಂಕುಗಳ (ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ) ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು, ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ಅಥವಾ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ ರೂ.30,000/- ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಮತ್ತು ಅವರ ಅರ್ಹ ಕುಟುಂಬ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುತ್ತಾರೆ (ನೌಕರರಾಗಿದ್ದಲ್ಲಿ ಕನಿಷ್ಟ ಮೂರು ವರ್ಷ ಸೇವೆ ಮತ್ತು ರೂ.30,000/- ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಬಗ್ಗೆ ಸಂಬಂಧಿಸಿದ ಸಹಕಾರ ಸಂಘದ ಆಡಳಿತ ಮಂಡಳಿ ದೃಢೀಕರಣ ಪತ್ರ ಲಗತ್ತಿಸಬೇಕು)
ಸಮಾಪನೆ / ನಿಷ್ಕ್ರಿಯಗೊಂಡಿರುವ ಸಹಕಾರ ಸಂಘಗಳ ಹಾಗೂ ನೌಕರರ ಸಹಕಾರ ಸಂಘಗಳ ಸದಸ್ಯರು ಅಥವಾ ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಖಾಸಗಿ ಕಂಪನಿ ಅಥವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಾಸಿಕ ರೂ.30,000/-ಕ್ಕಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಅಥವಾ ಒಬ್ಬ ವ್ಯಕ್ತಿ ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುವುದಿಲ್ಲ. ಅಂತಹವರನ್ನು ಯಶಸ್ವಿನಿ ಯೋಜನೆಯ ‘ಫಲಾನುಭವಿಯಾಗಿ ನೋಂದಾಯಿಸಬಾರದು. ಆದಾಗ್ಯೂ ಯಾವುದೇ ಕಾರಣಕ್ಕೆ ನೋಂದಾಯಿಸಿದ್ದಲ್ಲಿ ಸಹಿತ ಅವರು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ. ಅಂತಹ ವ್ಯಕ್ತಿಗಳು ಪಾವತಿಸಿದ ವಂತಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.