ಚಿಕ್ಕಮಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಹೀಗಾಗಿ ಇಂದು ಚಿಕ್ಕಮಗಳೂರು ನಗರ ಬಂದ್ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಇಂದು ಸಿಟಿ ರವಿ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿದರು. ಸಭೆಯ ಬಳಿಕ ಬಂದ್ ಬಗ್ಗೆ ಬಿಜೆಪಿ ಮುಖಂಡರು ಖಚಿತಪಡಿಸಿದ್ದಾರೆ.
ಇನ್ನೂ ಇದೆ ವಿಚಾರವಾಗಿ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಉಪನಾಯಕ ಅರವಿಂದ್ ಬೆಲ್ಲದ್ ಹಾಗೂ ಎಂಎಲ್‌ಸಿ ಎನ್ ರವಿ ಕುಮಾರ್ ಚರ್ಚೆ ಮಾಡಿದ್ದಾರೆ. ಸಿಟಿ ರವಿ ಬಂಧನಾ ಕುರಿತು ಎಲ್ಲಾ ಬಿಜೆಪಿ ಮುಖಂಡರು ಚರ್ಚಿಸಿದ್ದಾರೆ. ಬಳಿಕ ಸಿಟಿ ರವಿ ಭೇಟಿಗೆ ಎಲ್ಲಾ ನಾಯಕರು ಖಾನಾಪುರದತ್ತ ತೆರಳಿದ್ದಾರೆ.
ಸಿ.ಟಿ. ರವಿ ಬಂಧನ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಕರೆ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಿಜೆಪಿ ಕರೆ ನೀಡಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಬಂದ್ ಕರೆ ನೀಡಲಾಗಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಿಕ್ಕಮಗಳೂರು ಬಂದ್ ಗೆ ಕರೆ ನೀಡಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಧುರಾಜ್ ಅರಸ್ ಮನವಿ ಮಾಡಿದ್ದಾರೆ.