ಮಂಡ್ಯ : ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಹಸುವೊಂದನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮದ್ದೂರು ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಜರುಗಿದೆ.
ಮದ್ದೂರು ತಾಲೂಕಿನ ಕದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದ ವೆಂಕಟೇಶ್ ಎಂಬುವವರ ಹಸು ಎನ್ನಲಾಗಿದೆ. ವೆಂಕಟೇಶ್ ಎಂಬುವರು ವಡ್ಡರದೊಡ್ಡಿಯಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯದ ಜೊತೆಗೆ ಹಸು, ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಬುಧವಾರ ಸಂಜೆ ಹಸು, ಕುರಿ ಹಾಗೂ ಕೋಳಿಗಳನ್ನು ತೋಟದ ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಆದರೆ, ತಡರಾತ್ರಿ ಚಿರತೆಯೊಂದು ದಾಳಿ ಮಾಡಿ ಹಸುವನ್ನು ಕೊಂದು ಹಾಕಿದೆ.
ಈ ಬಗ್ಗೆ ರೈತ ವೆಂಕಟೇಶ್ ಮಾತನಾಡಿ, ಮೊನ್ನೆಯಷ್ಟೇ 20 ಸಾವಿರ ರೂಪಾಯಿ ಮೌಲ್ಯದ ಕುರಿಯನ್ನು ಚಿರತೆ ಕೊಂದು ಹಾಕಿದೆ. ಅದಾದ ಮಾರನೇ ದಿನವೇ 30 ಸಾವಿರ ರೂಪಾಯಿ ಮೌಲ್ಯದ ಹಸುವನ್ನು ಕೊಂದಿದೆ. ಇವುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೇ, ವಡ್ಡರದೊಡ್ಡಿ, ಮಾರದೇವನಹಳ್ಳಿ, ಹೊಸಹಳ್ಳಿ ದೊಡ್ಡಿ ಹಾಗೂ ಕೋಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಚಿರತೆಗಳ ಸೆರೆಗೆ ಮುಂದಾಗಬೇಕು. ಹಾಗೂ ಅರಣ್ಯಾಧಿಕಾರಿಗಳು ನಷ್ಟವನ್ನು ಭರಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ