ಬೆಳಗಾವಿ: ವಿಧಾನಸಭೆಯಿಂದ ಅಂಗೀಕೃತಗೊಂಡ ರೂಪದಲ್ಲಿದ್ದ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕರಿಸಲಾಯಿತು.
ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವಿಧೇಯಕವನ್ನು ಮಂಡಿಸಿದರು.
“ನಾನು ಬೆಂಗಳೂರಿನ ಎಲ್ಲಾ ಪಕ್ಷಗಳ ಶಾಸಕರ ಸಭೆ ಕರೆದಿದ್ದೆ. ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ವಿಚಾರವಾಗಿ ಒಟಿಎಸ್ ಅವಕಾಶ ಕಲ್ಪಿಸಬೇಕು ಎಂದು ಶಾಸಕರು ಸಲಹೆ ನೀಡಿದ್ದರು. ಒಟಿಎಸ್ ವ್ಯವಸ್ಥೆಯಿಂದ 3 ಲಕ್ಷ ಆಸ್ತಿಗಳು ಹೊಸದಾಗಿ ತೆರಿಗೆ ವ್ಯಾಪ್ತಿಯೊಳಗೆ ಸೇರ್ಪಡೆಯಾಗಿವೆ. ಇನ್ನೂ 2.26 ಲಕ್ಷ ಆಸ್ತಿಗಳು ಬಾಕಿ ಇವೆ. ಈ ಅವಕಾಶವನ್ನು 2024ರ ನವೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದರಿಂದ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಒಟ್ಟು 4284 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲಾಗಿತ್ತು. ಈಗ ಇದನ್ನು ವಿಧಾನ ಪರಿಷತ್ತಿನಲ್ಲಿ ಮಂಡನೆ ಮಾಡಿದ್ದು ಅಂಗೀಕಾರ ಮಾಡಬೇಕು ಎಂದು ಪ್ರಸ್ತಾಪಿಸುತ್ತಿದ್ದೇನೆ” ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯರಾದ ಶರವಣ ಅವರು, “ಉಪ ಮುಖ್ಯಮಂತ್ರಿಗಳು ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದಾರೆ. ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ. ಇದರ ಜತೆಗೆ ಒಟಿಎಸ್ ವ್ಯವಸ್ಥೆ ಉತ್ತಮವೇ. ಸಾರ್ವಜನಿಕರಿಗೆ ಬಿಬಿಎಂಪಿ ಅಧಿಕಾರಿಗಳಿಂದ ದಿನನಿತ್ಯ ಕಾಟ, ಕಿರುಕುಳ ನಡೆಯುತ್ತಿದೆ. ಅದನ್ನು ತಪ್ಪಿಸಬೇಕು. ನೀವು ಉತ್ತಮ ಉದ್ದೇಶದಿಂದ ಕಾಯ್ದೆ ತರುತ್ತಿದ್ದರೂ, ಅಧಿಕಾರಿಗಳ ಮಟ್ಟದಲ್ಲಿ ರೆವೆನ್ಯೂ ಇನ್ಸ್ ಪೆಕ್ಟರ್ ನಿಂದ ಎಲ್ಲಾ ಹಂತದಲ್ಲಿ ಕಿರುಕುಳ ನೀಡಲಾಗುತ್ತಿದೆ. ನಾಗರೀಕರಿಗೆ ಅನುಕೂಲವಾಗಬೇಕು, ಬಿಬಿಎಂಪಿಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಣವಾಗಬೇಕು ಎಂಬ ಉದ್ದೇಶವಿದೆ. ಇದು ಪಾರದರ್ಶಕವಾಗಿ ನಡೆಯುತ್ತಿಲ್ಲ, ತೆರಿಗೆ ಪಾವತಿದಾರರ ದಾರಿತಪ್ಪಿಸುವ ಕೆಲಸವಾಗುತ್ತಿದೆ. 10 ಲಕ್ಷ ತೆರಿಗೆ ಬಾಕಿ ಇದ್ದರೆ 1 ಲಕ್ಷ ತೆಗೆದುಕೊಂಡು ಉಳಿದಿದ್ದನ್ನು ಬಿಟ್ಟು ಬಿಡುತ್ತಿದ್ದಾರೆ. ಇದಕ್ಕೆ ಸೂಕ್ತ ದಾಖಲೆ ನೀಡಲು ನಾನು ಸಿದ್ಧನಿದ್ದೇನೆ. ಇಂತಹ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ? ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ನ್ಯಾಯ ಒದಗಿಸಬೇಕು. ಸರ್ಕಾರದಿಂದ ಬಡ್ಡಿ ವಜಾ, ದಂಡ ಕಡಿಮೆ ಮಾಡಿದ್ದೀರಿ. ಈ ಹಿಂದೆ ಆಸ್ತಿ ತೆರಿಗೆ ಪಾವತಿ ಮಾಡಿರುವವರಿಗೆ ಯಾವ ರೀತಿ ನೆರವು ನೀಡುತ್ತೀರಿ” ಎಂದು ಕೇಳಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿಗಳು, “ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಒಂದು ಪ್ರದೇಶದಲ್ಲಿ ಸ್ವಯಂ ಮೌಲ್ಯಮಾಪನ ಯೋಜನೆ ಪ್ರಾಯೋಗಿಕವಾಗಿ ಮಾಡಿದರು. ನಂತರದ ಸರ್ಕಾರ ಈ ಬಗ್ಗೆ ಕಾನೂನು ತಂದರು. ಈ ಕಾನೂನು ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಲಾಯಿತು. ಮೂರು ಅಂತಸ್ಥಿನ ಕಟ್ಟಡ ಕಟ್ಟಿದರೆ ಎರಡು ಅಂತಸ್ಥು ಮಾತ್ರ ಘೋಷಣೆ ಮಾಡಿಕೊಂಡು ಮೂರನೇ ಅಂತಸ್ಥನ್ನು ಘೋಷಣೆ ಮಾಡಿಕೊಳ್ಳುತ್ತಿರಲಿಲ್ಲ. 1 ಸಾವಿರ ಅಡಿ ಕಟ್ಟಡ ಕಟ್ಟಿದರೆ 500 ಅಡಿಗಳಷ್ಟು ಮಾತ್ರ ಘೋಷಣೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಸುಮಾರು 6-7 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ಒಂದು ಅವಕಾಶ ಮಾಡಿಕೊಡಲು ಒಟಿಎಸ್ ಜಾರಿಗೆ ತರಲಾಯಿತು. ಇದರಿಂದ ಪೂರ್ಣ ಪ್ರಮಾಣದಲ್ಲಿ ಎಲ್ಲರೂ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಸುಮಾರು 40-50% ಆಸ್ತಿಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಬಂದಿವೆ. ಸುಮಾರು 1700 ಕೋಟಿಯಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ.
ನಾವು ದುಬಾರಿ ದಂಡ ವಿಧಿಸುವ ಅವಕಾಶವಿತ್ತು. ಆದರೆ ಅದಕ್ಕೂ ಮುನ್ನ ಪ್ರಾಯೋಗಿಕವಾಗಿ ಜನರಿಗೆ ಒಂದು ಅವಕಾಶ ಕಲ್ಪಿಸಲಾಗಿದೆ. ಯಾರು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಅವರಿಗೆ ಮುಂದಿನ ವರ್ಷ ಕಟ್ಟುವ ತೆರಿಗೆಯಲ್ಲಿ ಈ ಮಾನದಂಡದ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಸರಿದೂಗಿಸಲಾಗುವುದು. ಪ್ರಾಮಾಣಿಕವಾಗಿ ಕಟ್ಟುವವರಿಗೆ ಬರೆ ಹಾಕಿ, ತೆರಿಗೆ ಪಾವತಿ ಮಾಡದವರಿಗೆ ಪ್ರಶಸ್ತಿ ನೀಡುವಂತೆ ಆಗುವುದಿಲ್ಲ” ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿ ಅವರು, “ನೀವು ವಿಧೇಯಕದಲ್ಲಿ ದಂಡವನ್ನು 100 ರೂಪಾಯಿಗೆ ನಿಗದಿ ಪಡಿಸಿದ್ದೀರಿ. ಇದು ಪ್ರತಿ ಪ್ರಕರಣಕ್ಕೋ ಅಥವಾ ಪ್ರತಿ ಚದರ ಅಡಿಗೋ” ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ಪ್ರತಿ ಪ್ರಕರಣಕ್ಕೆ 100 ರೂ. ದಂಡ ವಿಧಿಸಲಾಗಿದೆ. ನಮಗೆ ಹೆಚ್ಚು ಹಣ ಸಂಗ್ರಹಿಸುವುದಷ್ಟೇ ಉದ್ದೇಶವಲ್ಲ. ಸಾಧ್ಯವಾದಷ್ಟು ಹೆಚ್ಚು ಅರ್ಹರನ್ನು ಆಸ್ತಿ ತೆರಿಗೆ ವ್ಯಾಪ್ತಿಯೊಳಗೆ ತರುವುದಾಗಿದೆ. ತೆರಿಗೆ ವ್ಯಾಪ್ತಿಗೆ ಬರದೇ ಇರುವುದಕ್ಕಿಂತ ಕಡಿಮೆ ದಂಡ ವಿಧಿಸಿ ಅವರನ್ನು ತೆರಿಗೆ ವ್ಯಾಪ್ತಿಗೆ ತರುವುದು ಮುಖ್ಯ. ನಗರದಲ್ಲಿ ಇನ್ನೂ 2.50 ಲಕ್ಷ ಮನೆಗಳು ಇನ್ನೂ ತೆರಿಗೆ ವ್ಯಾಪ್ತಿಯೊಳಗೆ ಬರುವುದು ಬಾಕಿ ಇದೆ. ನಾವು ಬೆಂಗಳೂರಿನ ಪ್ರತಿ ಮನೆ ಸಮೀಕ್ಷೆ ಮಾಡಿ ಅವರಿಗೆ ಮನೆಬಾಗಿಲಲ್ಲೇ ಖಾತಾ ನೀಡಬೇಕು ಎಂದು ತೀರ್ಮಾನಿಸಿದ್ದೇವೆ. ನಂತರ ನೀವು ಇಷ್ಟು ಆಸ್ತಿ, ಕಟ್ಟಡ ಹೊಂದಿದ್ದು, ಪ್ರತಿ ವರ್ಷ ಇಂತಿಷ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕು ಎಂದು ತಿಳಿಸುವ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.
ನಂತರ ಮಾತನಾಡಿದ ಬಿಜೆಪಿ ಸದಸ್ಯರಾದ “ಇಷ್ಟು ವರ್ಷ ಸ್ವಯಂ ಘೋಷಣೆ ವ್ಯವಸ್ಥೆಯಲ್ಲಿ ಆಸ್ತಿ ತೆರಿಗೆ ಪಾವತಿಸುತ್ತಿರುವವರ ತೆರಿಗೆ ಪುನರ್ ಪರಿಶೀಲನೆ ಮಾಡುತ್ತೀರಾ? ಆಗ ಮಾಲೀಕರಿಗೆ ಸ್ವಾತಂತ್ರ್ಯ ನೀಡಲಾಗುತ್ತದೆಯೋ ಅಥವಾ ಅಧಿಕಾರಿಗಳು ಎಲ್ಲವನ್ನು ತೀರ್ಮಾನ ಮಾಡುತ್ತಾರೆಯೇ? ಈ ವಿಚಾರದಲ್ಲಿ ಯಾವ ಮಾನದಂಡ ನಿಗದಿಪಡಿಸಲಾಗಿದೆ” ಎಂದು ಪ್ರಶ್ನೆ ಕೇಳಿದರು.
“ಆರಂಭದಲ್ಲಿ ಈ ವ್ಯವಸ್ಥೆಯನ್ನು ಕೇವಲ ಒಂದು ತಿಂಗಳ ಕಾಲ ಮಾತ್ರ ನೀಡಲಾಗಿತ್ತು. ಆದರೆ ಶಾಸಕರ ಒತ್ತಡದ ಮೇರೆಗೆ ನವೆಂಬರ್ 30ರವರೆಗೆ ವಿಸ್ತರಣೆ ಮಾಡಲಾಯಿತು. ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಸೂಕ್ತ ರೀತಿ ನೆರವು ನೀಡಲಾಗುವುದು” ಎಂದು ತಿಳಿಸಿದರು.
ನಂತರ ಸಭಾಪತಿಗಳು ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದರು. ನಂತರ ಸರ್ವಾನುಮತದೊಂದಿಗೆ ಈ ವಿಧೇಯಕವನ್ನು ಅಂಗೀಕರಿಸಲಾಯಿತು.