ಬೆಳಗಾವಿ : ರಾಜ್ಯದ ಆರೋಗ್ಯಇಲಾಖೆ ಯಲ್ಲಿ ಒಟ್ಟು 69915 ಹುದ್ದೆಗಳು ಮಂಜೂರಾಗಿದ್ದು ಅವುಗಳಲ್ಲಿ 37045 ಹುದ್ದೆಗಳನ್ನು ಭರ್ತಿ ಮಾಡಿದ್ದು 32870 ಹುದ್ದೆಗಳು ಖಾಲಿ ಇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ. ಎಂ. ಜಿ. ಮುಳೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಖಾಲಿಯಿರುವ ಹುದ್ದೆಗಳಲ್ಲಿ ಗ್ರೂಪ್-ಡಿ ಹುದ್ದೆಗಳನ್ನು ಶೇ.30 ರಷ್ಟು Non-Clinical ಗೂ, ಶೇ. 45 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಒಟ್ಟಾರೆಯಾಗಿ ಶೇ. 75 ರಷ್ಟು ಮೀರದಂತೆ ಹೊರಗುತ್ತಿಗೆ ಮೂಲಕ ಟೆಂಡರ್ ಆಹ್ವಾನಿಸಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.
ರಾಜ್ಯದಲ್ಲಿ ಖಾಲಿಯಿರುವ ತಜ್ಞ ವೈದ್ಯರನ್ನು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೆಲವು ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಮತ್ತು
ಇಲಾಖೆಯ ಮುಖಾಂತರ ಸೇವಾನಿರತ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಬರುವ ತಜ್ಞ ವೈದ್ಯರನ್ನು ತಜ್ಞತ ಹುದ್ದೆಗೆ ನೇಮಿಸಲಾಗುತ್ತಿದೆ.
ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಒಂದು ವರ್ಷದ ಕಡ್ಡಾಯ ಸೇವೆಗಾಗಿ ಬರುವ ವೈದ್ಯ ಅಭ್ಯರ್ಥಿ/ತಜ್ಞ ವೈದ್ಯ ಅಭ್ಯರ್ಥಿಗಳನ್ನು ವೈದ್ಯರ/ತಜ್ಞರ ಹುದ್ದೆಗಳಿಗೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇಲಾಖೆಯಲ್ಲಿ ಖಾಲಿಯಿರುವ 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ರೋಗಿಗಳಿಗೆ ಅಡಚಣೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಫಾರ್ಮಸಿ ಅಧಿಕಾರಿಯ 400 ಹುದ್ದೆ, ಕಿರಿಯ ವೈದ್ಯಾಧಿಕಾರಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಯ 150 ಹುದ್ದೆ, ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿಯ 8 ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆಯಲ್ಲಿದೆ.
ಇಲಾಖೆಯಲ್ಲಿ ಖಾಲಿ ಇರುವ 200 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿ ಅಧಿಕಾರಿಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡುವವರೆಗೆ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿನ ಖಾಲಿಯಿರುವ ಒಟ್ಟು 320 ವಿವಿಧ ಅರೆ ವೈದ್ಯಕೀಯ ಹುದ್ದೆಗಳನ್ನು ವಿಶೇಷ ನೇಮಕಾತಿ ಸಮಿತಿ ಮೂಲಕ ಭರ್ತಿ ಮಾಡಲು Online ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿನ ಸಹಾಯಕ ಕೀಟ ಶಾಸ್ತ್ರಜ್ಞರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು, ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮುಂದುವರೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 9871 ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಿದ ನಂತರ ಈ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.