ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಪ್ರತ್ಯೇಕ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನ ಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 2024ನೇ ಸಾಲಿನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನ ಸಭೆಯಲ್ಲಿ ಪರ್ಯಾಲೋಚನೆ ಮಂಡಿಸಿ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಜೊತೆಯಲ್ಲೇ ಬಸವನ ಬಾಗೇವಾಡಿ ಅಭಿವೃದ್ಧಿಯನ್ನು ಸದ್ಯ ಕೈಗೊಳ್ಳಲಾಗುತ್ತಿತ್ತು. ಆದರೆ ಬಸವನ ಬಾಗೇವಾಡಿ ಇತಿಹಾಸವನ್ನು ಜನರಿಗೆ ಪರಿಚಯಿಸುವ ಹಾಗೂ ಹೆಚ್ಚಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಸರ್ಕಾರ ವಿಧೇಯಕ ಮಂಡಿಸಿದೆ. ಇದಕ್ಕೆ ಸದಸ್ಯರು ಪರ್ಯಾಲೋಚಿಸಿ ಅನುಮತಿ ನೀಡಬೇಕು ಎಂದು ಕೋರಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧೇಯಕವನ್ನು ಸ್ವಾಗತಿಸಿ, ಬಸವನಬಾಗೇವಾಡಿ ವ್ಯಾಪ್ತಿ ಲೋಕಸಭಾ ಸದ್ಯಸರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಬೇಕು. ಇದರಿಂದ ಕೇಂದ್ರ ಸರ್ಕಾರದ ಅನುದಾನ ಪಡೆಯುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯರು ಹಾಗೂ ಮುದ್ದೇಬಿಹಾಳ ಶಾಸಕರನ್ನು ಸಹ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿಸುವ ತಿದ್ದುಪಡಿಯೊಂದಿಗಿನ ವಿಧೇಯಕಕ್ಕೆ ಸದನದ ಅಂಗೀಕಾರವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತೊಮ್ಮೆ ಸದನದಲ್ಲಿ ಕೋರಿದರು.
ಸಭಾಧ್ಯಕ್ಷ ಯ.ಟಿ.ಖಾದರ್ ತಿದ್ದುಪಡಿಗಳೊಂದಿಗಿನ ವಿಧೇಯಕವನ್ನು ಅಂಗೀಕಾರಕ್ಕಾಗಿ ಸದನದ ಮುಂದೆ ಮಂಡಿಸಿದರು. ವಿಧಾನ ಸಭೆಯ ಸರ್ವಾನುಮತದಿಂದ ವಿಧೇಯಕವನ್ನು ಅಂಗೀಕರಿಸಿತು. ವಿಧಾನ ಪರಿಷತ್‌ನ ಅಂಗೀಕಾರಕ್ಕಾಗಿ ವಿಧೇಯಕ ಕಳುಹಿಸಿಕೊಡಲಾಗುವುದು.