ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಂವಿಧಾನವನ್ನು ಬದಲಾಯಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.
ಈ ದೇಶವು 1947 ರಿಂದ 1952 ರವರೆಗೆ ಚುನಾಯಿತ ಸರ್ಕಾರವನ್ನು ಹೊಂದಿರಲಿಲ್ಲ. ತಾತ್ಕಾಲಿಕ ವ್ಯವಸ್ಥೆ, ಆಯ್ದ ಸರ್ಕಾರ ಜಾರಿಯಲ್ಲಿತ್ತು. ಚುನಾವಣೆಗಳು ನಡೆದಿರಲಿಲ್ಲ. ಚುನಾವಣೆಯವರೆಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು. 1952ಕ್ಕೂ ಮೊದಲು ರಾಜ್ಯಸಭೆ ರಚನೆಯಾಗಿರಲಿಲ್ಲ. ರಾಜ್ಯಗಳಲ್ಲಿಯೂ ಚುನಾವಣೆಗಳು ನಡೆದಿಲ್ಲ” ಎಂದು ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪ್ರಯಾಣ’ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
“ಜನರಿಂದ ಯಾವುದೇ ಆದೇಶವಿರಲಿಲ್ಲ… 1951 ರಲ್ಲಿ, ಚುನಾಯಿತ ಸರ್ಕಾರ ಇಲ್ಲದಿದ್ದಾಗ, ಅವರು ಸುಗ್ರೀವಾಜ್ಞೆಯ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ದಾಳಿ ಮಾಡಲಾಗಿದೆ… ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ’ ಎಂದು ಕಿಡಿಕಾರಿದ್ದಾರೆ.
“ಅವಕಾಶ ಸಿಕ್ಕ ಕೂಡಲೇ ಅವರು ವ್ಯಕ್ತಪಡಿಸುವ ಹಕ್ಕಿಗೆ ಹೊಡೆತ ನೀಡಿದರು. ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಘೋರ ಅವಮಾನ. ಸಂವಿಧಾನ ರಚನಾ ಸಭೆಯಲ್ಲಿ ಏನನ್ನು ಸುಗಮಗೊಳಿಸಲು ಸಾಧ್ಯವಾಗಲಿಲ್ಲವೋ ಅದನ್ನು ಅವರು ಹಿಂದಿನ ಬಾಗಿಲಿನ ಮೂಲಕ ಸುಗಮಗೊಳಿಸಿದರು, ಅದೂ ಅವರು ಚುನಾಯಿತ ಸರ್ಕಾರದ ಪ್ರಧಾನಿಯಾಗದಿದ್ದಾಗ. ಅವರು ಪಾಪ ಮಾಡಿದ್ದಾರೆ” ಎಂದು ಪ್ರಧಾನಿ ಹೇಳಿದರು.