ಬೆಂಗಳೂರು : ನಿನ್ನೆ ಬೆಂಗಳೂರಿನ ಸದಾಶಿವನಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿದೆ.
ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ತರಲಾಗಿತ್ತು. ಈ ವೇಳೆ ಸೋಮನಹಳ್ಳಿ ಗ್ರಾಮಸ್ಥರು ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯದ ಬಳಿಕ ಹಿಂದೂ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ.
ರಾಷ್ಟ್ರಗೀತೆ ನುಡಿಸಿ 3 ಬಾರಿ ಕುಶಾಲತೋಪು ಹಾರಿಸಿ ಎಸ್.ಎಂ.ಕೃಷ್ಣಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಗಿದೆ. ವಿವಿಧ ಮಠದ ಸ್ವಾಮೀಜಿಗಳು ಅಂತಿಮ ದರ್ಶನ ಪಡೆದಿದ್ದು, ಅಂತ್ಯಕ್ರಿಯೆ 15 ಜನ ಸ್ವಾಮೀಜಿಗಳು ವೇದ-ಮಂತ್ರಗಳ ಪಠಣ ಮಾಡಿದ್ದಾರೆ. ಸನಾತನ ಹಿಂದೂ ಧರ್ಮದ ವಿಧಿ ವಿಧಾನ ಮುಗಿದ ಬಳಿಕ ಒಕ್ಕಲಿಗ ಸಂಪ್ರದಾಯದಂತೆ ತಾತನ ಚಿತೆಗೆ ಪ್ರೀತಿಯ ಮೊಮ್ಮಗ ಅಮರ್ತ್ಯ ಅಗ್ನಿ ಸ್ಪರ್ಶ ನೀಡಿದ್ದಾರೆ.
ಅಂತ್ಯಕ್ರಿಯೆಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.
ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ 2017 ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು 1999 ರಿಂದ 2004 ರವರೆಗೆ ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿದ್ದರು ಮತ್ತು 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ 1989 ರಿಂದ ಜನವರಿ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1971ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.