ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಬ್ಬ ಸಮರ್ಥ ರಾಜಕಾರಣಿ, ಸಂಸದೀಯ ಪಟುವಾಗಿ ಈ ರಾಜ್ಯದ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗೃಹ ಸಚಿವರಾಗಿ ತಾವು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಒಮ್ಮತದಿಂದ ಸ್ವೀಕರಿಸುತ್ತಿದ್ದರು ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅವರೊಂದಿಗೆ ಗೃಹ ಸಚಿವರಾಗಿದ್ದ ದಿನಗಳನ್ನು ನೆನೆಪು ಮಾಡಿಕೊಂಡಿದ್ದಾರೆ, ಡಾ.ರಾಜಕುಮಾರ್ ಅಪರಣವಾದ ಸಂದರ್ಭದಲ್ಲಿ ಅವರು ತಮ್ಮ ಜೊತೆ ಜೊತೆಯಲ್ಲಿ ಸಂಯಮದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಬಣ್ಣಿಸಿದ್ದಾರೆ. ತಮ್ಮ ಸಹೋದ್ಯೋಗಿಯಾಗಿ ರಾಜಕೀಯ ಜೀವನದುದ್ದಕ್ಕೂ ಸ್ನೇಹಮಯಿಯಾಗಿದ್ದರು, ರಾಜ್ಯದ ಬೆಳವಣಿಗೆಯ ದೃಷ್ಟಿಯಿಂದ ಇಬ್ಬರೂ ಒಟ್ಟಿಗೆ ಕಾರ್ಯನಿರ್ವಹಿಸುವಸುವ ಹಲವಾರು ಅವಕಾಶಗಳು ಒದಗಿ ಬಂದಿದ್ದವು ಎಂದು ತಿಳಿಸಿದ್ದಾರೆ,
ಬೆಂಗಳೂರು ನಗರವನ್ನು ವಿಶ್ವಮಾನ್ಯ ನಗರವನ್ನಾಗಿ ನಿರ್ಮಿಸಲು ಎಸ್.ಎಂ.ಕೃಷ್ಣ ಅವರು ಅಡಿಪಾಯ ಹಾಕಿದರು, ಬೆಂಗಳೂರು ನಗರವನ್ನು ಸಿಂಗಪುರವಾಗಿ ನೋಡಲು ಇಚ್ಛಿಸಿ, ನಗರವನ್ನು ಸೌಂದರ್ಯೀಕರಣ ಮಾಡಲು ಆರಂಭಿಸಿದರು. ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯನ್ನಾಗಿ ರೂಪಿಸುವ ಕನಸನ್ನು ಅವರು ಅಂದೇ ಕಂಡಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರೊಂದಿಗಿದೆ, ಕೇಂದ್ರ ಸಚಿವರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿ ಸಮರ್ಥ ಆಡಳಿತ ನೀಡಿದ ಎಸ್.ಎಂ.ಕೃಷ್ಣ ಅವರು ಈ ದೇಶ ಕಂಡ ಅದ್ಭುತ ಸಂಸದೀಯ ಪಟುಗಳಲ್ಲಿ ಅತಿ ಎತ್ತರದ ಗಣ್ಯರಾಗಿ ಕಂಡಿದ್ದಾರೆ ಎಂದು ಖರ್ಗೆ ಅವರು ನುಡಿದಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಎಐಸಿಸಿ ಅಧ್ಯಕ್ಷರು ಅವರ ನಿಧನದಿಂದ ದೇಶ ಹಿರಿಯ ತಲೆಮಾರಿನ ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ, ಕರ್ನಾಟಕದ ಪಾಲಿಗೆ ಅವರ ನಿಧನ ತುಂಬಲಾರದ ನಷ್ಟ ಎಂದಿದ್ದಾರೆ. ಅವರ ಕುಟುಂಬಕ್ಕೆ ಅಗಲಿಕೆಯನ್ನು ಭರಿಸುವ ಶಕ್ತಿ ಸಿಗುವಂತಾಗಲಿ ಎಂದು ತಿಳಿಸಿದ್ದಾರೆ.
BIG NEWS: ಹಿರಿಯೂರು ಎಸಿಎಫ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಚಿನ್ನಾಭರಣ, ಆಸ್ತಿ ಕಂಡು ಅಧಿಕಾರಿಗಳೇ ಶಾಕ್
ಕರ್ನಾಟಕದ ‘ಸೂಟ್-ಬೂಟ್’ ಸಿಎಂ ಎಸ್.ಎಂ ಕೃಷ್ಣ: ಇದು ಅವರ ಪ್ರಯಾಣದ ಏರಿಳಿತಗಳ ಹಾದಿ | SM Krishna Biography