ಬೆಂಗಳೂರು: ಹೃದಯಾಘಾತದಿಂದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಜನತೆಯ ಆರ್ಥಿಕ ಉತ್ಕರ್ಷಕ್ಕೆ ಕಾರಣವಾಗುವ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಮತ್ತು ಅಭಿವೃದ್ಧಿ ಗತಿಯ ಚಲನ ಶೀಲತೆಯನ್ನು ಸವಾಲಾಗಿ ಸ್ವೀಕರಿಸಿ, ಪ್ರಾದೇಶಿಕ ಅಸಮತೋಲನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯ ಸದುದ್ದೇಶದಿಂದ ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಉನ್ನತಾಧೀಕಾರ ಸಮಿತಿಯನ್ನು ನೇಮಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಪರ ಚಿಂತನೆಯನ್ನು ಎತ್ತರಕ್ಕೆ ಕೊಂಡೊಯ್ದ ಕಾಲಘಟ್ಟದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಎಸ್.ಎಂ. ಕೃಷ್ಣ ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ಡಿ.ಎಂ. ನಂಜುಂಡಪ್ಪ ಸಮಿತಿಯನ್ನು ನೇಮಕ ಮಾಡಬೇಕೆಂಬ ಸಲಹೆಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ ಎಸ್.ಎಂ. ಕೃಷ್ಣ ಅವರನ್ನು ನಾನು ಅತ್ಯಂತ ಕೃತಾಂಜಲಿಯಿಂದ ನೆನೆಯುವೆ. ನನ್ನ “ಚಲುವ ಕನ್ನಡ ನಾಡು ನನಸಾಗದ ಕನಸು” ಪುಸ್ತಕದ ಉಪಸಂಹಾರ(Conclusion)ವನ್ನು 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭಾಗವನ್ನಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದ ಎಸ್.ಎಂ. ಕೃಷ್ಣ ನನ್ನೊಂದಿಗೆ ಸುದೀರ್ಘವಾಗಿ ಸಮಾಲೋಚಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಈ ಸಮಿತಿಯನ್ನು ನೇಮಿಸಿದ್ದು ಐತಿಹಾಸಿಕ ಘಟನೆ ಎಂದು ಹೇಳಿದ್ದಾರೆ.
ಕೃಷ್ಣ-ಕಾವೇರಿ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಪ್ರತಿಯೊಬ್ಬ ನಾಗರೀಕನ ಆಶೋತ್ತರಗಳನ್ನು ಎಲ್ಲ ವೇದಿಕೆಗಳಲ್ಲಿ ಪ್ರತಿಪಾದಿಸಿದ ಎಸ್.ಎಂ. ಕೃಷ್ಣ ಜಲವಿವಾದಗಳ ವಿಷಯಗಳಲ್ಲಿ ಕರ್ನಾಟಕಕ್ಕೆ ನ್ಯಾಯ ತಂದುಕೊಡುವಲ್ಲಿ ಅವಿರತವಾಗಿ ಶ್ರಮ ವಹಿಸಿದರು. ಕರ್ನಾಟಕ ಪ್ರತಿದಿನ 10000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿದಾಗ ಆ ಆದೇಶವು ಪ್ರಧಾನಮಂತ್ರಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ಸಭೆ ಸೇರುವವರೆಗೂ ಮುಂದುವರೆಯುತ್ತದೆ ಎಂದು ಹೇಳಿ ಇಡೀ ಕರ್ನಾಟಕ ದಿಗ್ಬ್ರಮೆಗೊಂಡಾಗ ಅತ್ಯಂತ ಕಡಿಮೆ ಅವಧಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಸಿ ತಮಿಳುನಾಡಿಗೆ ನೀರು ಬಿಡುಗಡೆ ನಿಲ್ಲಿಸಿ ಕರ್ನಾಟಕಕ್ಕೆ ನ್ಯಾಯ ತಂದುಕೊಟ್ಟ ಕೀರ್ತಿಗೆ ಪಾತ್ರರಾದವರು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಂದು ಅಧಿಕಾರದಲ್ಲಿದ್ದ ಬಿ.ಜೆ.ಪಿ ನಾಯಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯಾಂಗ ನಿಂದನೆಯನ್ನು ಅಂದಿನ ಜಲಸಂಪನ್ಮೂಲ ಸಚಿವನಾಗಿದ್ದ ನನ್ನೊಂದಿಗೆ ಎದುರಿಸಿದರು. ಕೃಷ್ಣ ಕಾವೇರಿ ಜಲವಿವಾದಗಳಲ್ಲಿ, ಗಡಿವಿವಾದಗಳಲ್ಲಿ ರಾಜ್ಯದ ಹಿತವೇ ಶ್ರೇಷ್ಠ ಎನ್ನುವ ನಿಲುವನ್ನು ಸದಾವಕಾಲ ಪಾಲಿಸಿದವರು ಎಂದಿದ್ದಾರೆ.
ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಕಣಜ ಮತ್ತು ಕೇಂದ್ರಸ್ಥಾನವನ್ನಾಗಿ ಪರಿವರ್ತಿಸುವಲ್ಲಿ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯನ್ನಾಗಿ ಬದಲಾವಣೆಗೆ ಅಪಾರ ಕೊಡುಗೆ ನೀಡಿದ ಎಸ್.ಎಂ. ಕೃಷ್ಣ ಸಭ್ಯ, ಸುಸಂಸ್ಕೃತ ಮತ್ತು ಮುತ್ಸದ್ದಿ ಶ್ರೇಷ್ಠ ರಾಜಕಾರಣಿಗಳ ಸಾಲಿನ ಮುಂಚೂಣಿಯಲ್ಲಿದ್ದವರು. ಅಂದು 1999ರಲ್ಲಿ ಉತ್ತರ ಕರ್ನಾಟಕದಿಂದ ಆಯ್ಕೆಯಾಗಿದ್ದ 48 ಶಾಸಕರು ಎಸ್.ಎಂ.ಕೃಷ್ಣ ಅವರಿಗೆ ಶಕ್ತಿಯಾಗಿ ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನದ ಬಹುದೊಡ್ಡ ಕೊಡುಗೆಯಾಗಿದ್ದಿತು. ನನ್ನನ್ನು ಹಾಗೂ ನನ್ನ ಸಹೋದರ ಡಿ.ಆರ್.ಪಾಟೀಲ ಅವರನ್ನು ಮಕ್ಕಳಂತೆ ಭಾವಿಸಿ ನಮ್ಮ ಏಳಿಗೆಯನ್ನು ಬಯಸಿದ ಎಸ್.ಎಂ ಕೃಷ್ಣ ನನ್ನನ್ನು ತಮ್ಮ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಇಲಾಖೆಯ ಸಚಿವನನ್ನಾಗಿ ಅಧಿಕಾರ ನೀಡಿದ ಕ್ಷಣಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ನೀರಾವರಿ ಯೋಜನೆಗಳಿಗೆ ಅದರಲ್ಲೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯಂತ ಮಹತ್ವಾಕಾಂಕ್ಷಿ ಯೋಜನೆಗೆ ಆಮೆ ವೇಗವನ್ನು ತಪ್ಪಿಸಿ ಜಿಂಕೆ ವೇಗವನ್ನು ಒದಗಿಸಿದಿ ಖ್ಯಾತಿಗೆ ಪಾತ್ರರಾದವರು. ಕರ್ನಾಟಕದ ಮಹತ್ವದ ಜಲವಿವಾದಗಳ ಸಂದರ್ಭದಲ್ಲಿ ದೃಢವಾದ ನಿಲುವನ್ನು ಕರ್ನಾಟಕದ ಧ್ವನಿಯಾಗಿ ಗಟ್ಟಿಯಾಗಿ ಪ್ರತಿಪಾದಿಸುವಲ್ಲಿ ಕರ್ನಾಟಕದ ನಾಗರೀಕರಿಗೆ ಹೆಗಲಿಗೆ-ಹೆಗಲು ಕೊಟ್ಟವರು ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು. ಆ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಯನ್ನು ಮಾರ್ಪಡಿಸಿ ಕಳಸಾ-ಬಂಡೂರಿ ಯೋಜನೆಗಳನ್ನಾಗಿ ಅತ್ಯಂತ ಚಾಕಚಕ್ಯತೆಯಿಂದ ಜಲಸಂಪನ್ಮೂಲ ಇಲಾಖೆ ಸಲ್ಲಿಸಿದ್ದ ಯೋಜನಾ ವರದಿಯನ್ನು ಅಂಗೀಕರಿಸಿದ ಮತ್ತು ಆ ಕಾರ್ಯಕ್ಕೆ ಚಾಲನೆ ನೀಡಿದ ಎಸ್.ಎಂ. ಕೃಷ್ಣ ಸಚಿವ ಸಂಪುಟದ ಕೊಡುಗೆಯನ್ನು ನಾನು ಕೃತಜ್ಞತೆಯನ್ನು ಸ್ಮರಿಸಿದ್ದಾರೆ.
ಎಸ್.ಎಂ. ಕೃಷ್ಣ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ, ಶಾಸಕನಾಗಿ, ವಿಧಾನಸಭೆಯ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಕರ್ನಾಟಕ ವಿಧಾನ ಮಂಡಳದ ಎರಡೂ ಸದನಗಳ ಸದಸ್ಯರಾಗಿ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿ ಸಲ್ಲಿಸಿದ ಸೇವೆ ಅನುಪಮವಾದದ್ದು. ಕರ್ನಾಟಕ ಕಂಡ ಅಪರೂಪದ ಹಿರಿಯ ಚೈತನ್ಯವೊಂದು ಇಂದು ನಮ್ಮನ್ನು ಅಗಲಿ ನಾಡನ್ನು ಬಡವಾಗಿಸಿದೆ. ರಾಷ್ಟçಕ್ಕೆ ತುಂಬಿಬಾರದ ಹಾನಿಯಾಗಿದೆ. ಎಸ್.ಎಂ.ಕೃಷ್ಣ ಅವರ ನಿಧನದಿಂದ ಮಡುಗಟ್ಟಿರುವ ಶೋಕವನ್ನು ಸೈರಿಸುವ ಶಕ್ತಿಯನ್ನು ಎಲ್ಲರಿಗೂ ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಾಘನನಾದ ಭಗವಂತನು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.