ಬೆಂಗಳೂರು : ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದು, ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಶ್ರೀ.ಎಸ್.ಎಂ.ಕೃಷ್ಣ ರವರು ದಿನಾಂಕ: 10.12.2024ರ ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ.
ಮುಂದುವರೆದು ದಿವಂಗತರ ಅಂತ್ಯಕ್ರಿಯೆಯನ್ನು 2:11.12.20240 ಬುಧವಾರದಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ದಿನಾಂಕ:11.12.2024ರ ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ದಿನಾಂಕ:10.12.2024 ರಿಂದ ದಿನಾಂಕ:12.12.2024 ರವರೆಗೆ (ಉಭಯ ದಿನಗಳು ಸೇರಿ) ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುವುದು ಹಾಗೂ ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದು.