ಬೆಳಗಾವಿ ಸುವರ್ಣ ವಿಧಾನಸೌಧ : ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತç ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು.
ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸದನಕ್ಕೆ ಅವರು ತಿಳಿಸಿದರು.
ವಿಧಾನ ಪರಿಷತನಲ್ಲಿ ಡಿಸೆಂಬರ್ 9ರಂದು ಸದಸ್ಯರಾದ ಟಿ.ಎನ್.ಜವರಾಯಿಗೌಡ, ಐವನ್ ಡಿ ಸೋಜಾ, ಸಿ.ಟಿ.ರವಿ, ಶರವಣ.ಟಿ.ಎ, ನಿರಾಣಿ ರುದ್ರಪ್ರ ಹನುಮಂತಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯಾದ್ಯಂತ ಜನವರಿ-2021 ರಿಂದ ಮೇ 2023ರ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ ರೂ. 13,51,30,858 ಗಳ ದಂಡ ವಿಧಿಸಿ, ಅನರ್ಹರಿಗೆ ನೀಡಿದ ಸವಲತ್ತುಗಳಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರ ಕ್ರಮವಹಿಸಿದೆ.
ಆಹಾರ ಇಲಾಖೆಯ ಉಗ್ರಾಣಗಳಿಂದ ಅಕ್ರಮವಾಗಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟವಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ಕ್ರಮ ವಹಿಸಿದೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಣೆ ಕಂಡು ಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ ಎಂದರು.
ರಾಜ್ಯಾದ್ಯಂತ 2024-25ನೇ ಸಾಲಿನಲ್ಲಿ 213 ಎಫ್.ಐ.ಆರ್ ದಾಖಲಿಸಿ ಒಟ್ಟು ರೂ. 2,68,07,872 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಈ ಕುರಿತು ಪರಿಶೀಲಿಸಲು ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ನೋಡಲ್ ಅಧಿಕಾರಿಗಳನ್ನು ವಿಭಾಗವಾರು ನೇಮಕ ಮಾಡಲಾಗಿದೆ ಎಂದರು.
ಈ ಹಿಂದೆ ಕೆಲವು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದ ಫಲಾನುಭವಿಗಳು ಹಾಲಿ ಬಡತನ ರೇಖೆಗಿಂತ ಮೇಲೆ ಬಂದಿದ್ದು, ಸದರಿ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಜಿಎಸ್ ಟಿ ಅಥವಾ ಸಿಎಸ್ ಟಿ ಪಾವತಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಆಹಾರ ಇಲಾಖೆಯಲ್ಲಿ ಬಳಸುವ ಸರ್ವರ್ ಹಳೆಯದಾಗಿದೆ. ಈ ಕಾರಣದಿಂದಾಗಿ ಎನ್ ಐಸಿಯಿಂದ ಕೆಎಸ್ ಡಿಸಿ ಗೆ ಆಹಾರ ತಂತ್ರಾಂಶದ ಮೈಗ್ರೇಶನ್ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕಾರ್ಯಪೂರ್ಣವಾದ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಹಾಗೂ ಪಡಿತರ ತಿದ್ದುಪಡಿ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಬಾಕಿ ಅರ್ಜಿಗಳ ಕಾಲಮಿತಿ ವಿಲೇಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
BREAKING: ನಾಳೆಯಿಂದ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವಿಧಾನಸಭೆ ಕಲಾಪ ನಡೆಸಲು ತೀರ್ಮಾನ