ಬೆಳಗಾವಿ: ಬೆಳಗಾವಿ ಸುವರ್ಣ ಸೌಧದಲ್ಲಿ 16ನೇ ವಿಧನಸಭೆಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಉಪಚುನಾವಣೆಯಲ್ಲಿ ಗೆದ್ದ ಮೂವರು ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಾಸೀರ್ ಪಠಾಣ್. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಸಂಡೂರು ವಿಧಾನಸಭೆ ಕ್ಷೇತ್ರದ ಶಾಸಕಿ ಅನ್ನಪೂರ್ಣ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯು.ಟಿ. ಖಾದರ್ ಅವರು ಸಂವಿಧಾನ ಪೀಠಿಕೆ ಬೋಧಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ 20ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದ್ದು, ಖಾಸಗಿ ವಿಧೇಯಕ ಸೇರಿದಂತೆ ಒಟ್ಟು 15 ವಿಧೇಯಕಗಳು ಮಂಡನೆಯಾಗಲಿವೆ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಾಧಿಪತಿ ಸ್ಥಾನಕ್ಕೆ ನೇಮಕಾತಿ ಅಧಿಕಾರ ರಾಜ್ಯಪಾಲರಿಂದ ಸಿಎಂಗೆ ನೀಡುವ ವಿಧೇಯಕ, ಗಣಿ ಇಲಾಖೆಯಲ್ಲಿ ಹೊಸ ತೆರಿಗೆ ಪ್ರಸ್ತಾಪ ಸೇರಿ ಹಲವು ವಿಧೇಯಕಗಳು, ತಿದ್ದುಪಡಿ ವಿಧೇಯಕಗಳು ಸೇರಿ ಒಟ್ಟು 15 ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೋಪ್ ವೇಗಳ ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ಆದ್ಯಾದೇಶ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ಆದ್ಯಾದೇಶ 2024 ಗಳಿಗೆ ಒಪ್ಪಿಗೆ ಪಡೆಯಲಾಗುವುದು.