ಗಾಜಿಯಾಬಾದ್ : ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಮನೆಯೊಂದರ ಶೌಚಾಲಯದ ಪೈಪ್ ನಲ್ಲಿ 6 ತಿಂಗಳ ಭ್ರೂಣವೊಂದು ಪತ್ತೆಯಾಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಶೌಚಾಲಯದ ಪೈಪ್‌ನಲ್ಲಿ ನೀರು ನಿಂತಿರುವುದನ್ನು ಗಮನಿಸಿದ ಮನೆ ಮಾಲೀಕ ದೇವೇಂದ್ರ ಅಲಿಯಾಸ್ ದೇವ ಪೈಪ್ ಒಡೆದು ನೋಡಿದಾಗ ಅದರಲ್ಲಿ ಭ್ರೂಣ ಸಿಲುಕಿರುವುದು ಕಂಡು ಬಂದಿದೆ.
ಶೌಚಾಲಯದ ಪೈಪ್‌ನಲ್ಲಿ ಸಿಲುಕಿದ್ದ 6 ತಿಂಗಳ ಭ್ರೂಣ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಇಂದಿರಾಪುರಂ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ನೀರು ತುಂಬಿದ್ದರಿಂದ ಪೈಪ್ ಒಡೆದು ಭ್ರೂಣ ಹೊರಬಿದ್ದಿದೆ ಎಂದು ವಿಚಾರಣೆ ವೇಳೆ ಮಾಲೀಕರು ತಿಳಿಸಿದ್ದಾರೆ. ಅವರ ಮನೆಯಲ್ಲಿ 9 ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಅಕ್ಕಪಕ್ಕದ ಜನರು ಕೂಡ ಸ್ಥಳದಲ್ಲಿ ಜಮಾಯಿಸಿದ್ದು, ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಭ್ರೂಣ ಸುರಕ್ಷಿತವಾಗಿರಲು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪರಾಧದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲು ಈಗ ಬಾಡಿಗೆದಾರರ ಡಿಎನ್‌ಎಯನ್ನು ಭ್ರೂಣದ ಡಿಎನ್‌ಎಯೊಂದಿಗೆ ಹೊಂದಿಸಲಾಗುವುದು ಎಂದು ಇಂದಿರಾಪುರಂ ಸಹಾಯಕ ಪೊಲೀಸ್ ಕಮಿಷನರ್ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದಾರೆ. ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.