ನವದೆಹಲಿ : ಕರ್ನಾಟ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಚಳಿಯ ನಡುವೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಇನ್ನು 2-3 ದಿನಗಳಲ್ಲಿ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಗುಡ್ಡಗಾಡು ರಾಜ್ಯಗಳಲ್ಲಿ ಹಿಮಪಾತವು ಚಳಿಯ ತೀವ್ರತೆಯನ್ನು ಹೆಚ್ಚಿಸಬಹುದು. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಳೆ ಮತ್ತು ಕೆಲವು ರಾಜ್ಯಗಳಲ್ಲಿ ದಟ್ಟವಾದ ಮಂಜು ಬೀಳಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುತ್ತಿದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಇದು ರೂಪುಗೊಳ್ಳುವ ಸಾಧ್ಯತೆ ಇದೆ. ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಡಿಸೆಂಬರ್ 9 ರ ವೇಳೆಗೆ ಶ್ರೀಲಂಕಾ ಕರಾವಳಿಯನ್ನು ತಲುಪುತ್ತದೆ. ಡಿಸೆಂಬರ್ 12 ರ ವೇಳೆಗೆ ಈ ಪ್ರದೇಶವು ಶ್ರೀಲಂಕಾ ಮತ್ತು ತಮಿಳುನಾಡು ಬಳಿ ಚಂಡಮಾರುತವಾಗಿ ಬದಲಾಗುತ್ತದೆ. ಇದರ ಪರಿಣಾಮದಿಂದ ಡಿಸೆಂಬರ್ 12 ಮತ್ತು 13 ರಂದು ತಮಿಳುನಾಡಿನ ದಕ್ಷಿಣ ಕರಾವಳಿ, ಕರ್ನಾಟಕ, ಪುದುಚೇರಿ, ಕೇರಳ, ಆಂಧ್ರಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಉತ್ತರ ಭಾರತದ ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ ಬೆಳಗ್ಗೆ ಮತ್ತು ಸಂಜೆ ದಟ್ಟ ಮಂಜು ಕವಿದಿರುವ ಸಾಧ್ಯತೆ ಇದೆ. ಜಾರ್ಖಂಡ್, ಉತ್ತರ ಪ್ರದೇಶ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಪ್ರತ್ಯೇಕ ಭಾಗಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇದರಿಂದಾಗಿ ಈ ರಾಜ್ಯಗಳಲ್ಲಿ ತೀವ್ರ ಚಳಿಯಾಗಲಿದೆ.