ಚಾಮರಾಜನಗರ : ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಯಲ್ಲಿ ಜನನ ಪ್ರಮಾಣ ಪತ್ರ ನೀಡಲು ಅರ್ಜಿದಾರರಿಂದ ರೂ 200ಗಳನ್ನು ಬಹಿರಂಗವಾಗಿ ಲಂಚ ಪಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದ ಮಹದೇವರ ಪತ್ನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಆಸ್ಪತ್ರೆಯಿಂದ ಮಗು ಜನನದ ಬಗ್ಗೆ ಮಾಹಿತಿ ನಗರಸಭೆಗೆ ರವಾನೆಯಾಗಿ ದಾಖಲೆಗೊಂಡಿತ್ತು. ಮಹದೇವ ಶೆಟ್ಟಿ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಕಳೆದ ತಿಂಗಳು 22ರಂದು ಸಲ್ಲಿಸಿದ್ದರು. ಪ್ರಮಾಣ ಪತ್ರ ಕೊಡಲು ಈಗ ಬಾ ಆಗ ಬಾ ಹೋಗಿ ಬಾ 15 ದಿನಗಳಿಂದಲೂ ಸತಾಯಿಸುತ್ತಿದ್ದರು.
ಈತ 15 ದಿನಗಳಿಂದಲೂ ತಿರುಗುತ್ತಿದ್ದೇನೆ ಶೀಘ್ರ ಕೊಡುವಂತೆ ಒತ್ತಡ ಹೇರಿದಾಗ ಅದಕ್ಕೆಲ್ಲ ಹಣ ಕೊಡ ಬೇಕಾಗುತ್ತದೆ ಎಂಬ ಮಾಹಿತಿ ಅರಿತ ಅರ್ಜಿದಾರರು ಎಷ್ಟು ಎಂದು ಕೇಳಿದಾಗ 200 ರೂಪಾಯಿ ಕೊಡಬೇಕಾಗುತ್ತದೆ ಎಂದು ಜನನ ಪ್ರಮಾಣ ಪತ್ರ ನೀಡುವ ಹೊರಗುತ್ತಿಗೆ ಸಿಬ್ಬಂದಿ ಕನ್ಯಾ ತಿಳಿಸಿದ್ದಾರೆ. 200ರೂ ಲಂಚ ಕೊಡುತ್ತಿದ್ದಂತೆ ಯಾವುದೇ ತಕರಾರಿಲ್ಲದೆ ಜನನ ಪ್ರಮಾಣಪತ್ರ ಕೈಗೆ ಕೊಟ್ಟು ಕಳುಹಿಸಿದ್ದಾರೆ.
ನಗರಸಭೆಯಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಕೂಡ ಇಲ್ಲದಂತಿದೆ. ನಗರಸಭೆ ಸಾರ್ವಜನಿಕರಿಗೆ ನರಕಸಭೆಯಾಗಿದೆ ಕಾಂಚಾಣ ಸದ್ದು ಮಾಡಿದರೆ ಮಾತ್ರ ಕೆಲಸವಾಗುತ್ತದೆ ಇಲ್ಲದಿದ್ದರೆ ಆ ವ್ಯಕ್ತಿಯ ಪಾಡು ನಾಯಿಪಾಡಾಗುತ್ತದೆ.
ನಗರಸಭೆಯ ಸಿಬ್ಬಂದಿಗಳನ್ನು ಯಾರಾದರೂ ಪ್ರಶ್ನೆ ಮಾಡಿದರೆ ಸಂಬಂಧಪಟ್ಟ ಕಡತಗಳು ಇಲ್ಲ ಹೊರಗೆ ಹೋಗಿ ಎಂದು ಗತ್ತಿನಿಂದ ಹೇಳುವರು. ಲಂಚದ ರೂಪದಲ್ಲಿ ಹಣವನ್ನು ನೀಡಿದರೆ ಎರಡು ಮೂರು ದಿನಗಳಲ್ಲೇ ಕಡತಗಳು ಪ್ರತ್ಯಕ್ಷವಾಗಿ ಕೆಲಸಗಳು ಬೇಗ ಆಗುತ್ತದೆ ಇಂತಹ ಭ್ರಷ್ಟ ಅಧಿಕಾರಿ ಸಿಬ್ಬಂದಿಗಳು ನಗರಸಭೆಯಲ್ಲಿ ಇರುವ ತನಕ ಚಾಮರಾಜನಗರ ಜಿಲ್ಲಾ ಕೇಂದ್ರ ಹೇಗೆ ಉದ್ದಾರವಾದೀತು. ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರಾಜಕಾರಣಿಗಳು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಇವರುಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹದೇವ ಶೆಟ್ಟಿ ಆಗ್ರಹಿಸಿದ್ದಾರೆ.