ಉಡುಪಿ: ಮುಸ್ಲಿಮರಿಂದ ಮತದಾನದ ಹಕ್ಕನ್ನು ವಾಪಸ್ ಪಡೆಯಬೇಕು ಎಂದು ಚಂದ್ರಶೇಖರನಾಥ ಸ್ವಾಮೀಜಿ ಅವರು ನೀಡಿರುವ ಹೇಳಿಕೆ ಮಾದರಿಯಲ್ಲೆ ಬಿಜೆಪಿಯವರು ನೀಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸವಾಲು ಹಾಕಿದರು.
ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿಗೆ ಬಿಜೆಪಿ ಬೆಂಬಲ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ದೇಶದಲ್ಲಿ ಸಂವಿಧಾನ ಇದೆಯಲ್ಲಾ? ಸಂವಿಧಾನ ದಿನದ ಬಗ್ಗೆ ನಾವು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದೇವಲ್ಲವೇ? ಸಂವಿಧಾನ ಎಲ್ಲರಿಗೂ ಅನ್ವಯಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಒಂದುಕಡೆ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಬಿಜೆಪಿಯವರು ಹೇಳಿ ಬಿಡಲಿ ನೋಡೋಣ.
ಸ್ವಾಮೀಜಿಗಳು ಇರುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡೋದಕ್ಕೆ, ಹಾಳು ಮಾಡೋದಿಕ್ಕೆ ಅಲ್ಲ ಎಂದರು.
ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸ್ವಾಮೀಜಿಗಳ ಕೆಲಸ ಅಲ್ಲ. ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ನಾವೆಲ್ಲಾ ಭಾರತದಲ್ಲಿದ್ದೇವೆ ಅಂಬೇಡ್ಕರ್ ಅವರ ಸಂವಿಧಾನ ಇದೆ. ಈ ದೇಶದಲ್ಲಿ ರಾಷ್ಟ್ರಪತಿಯಿಂದ ಹಿಡಿದು ಜನಸಾಮಾನ್ಯರಿಗೂ ಒಂದೇ ಕಾನೂನು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುನರುಚ್ಚಿಸಿದರು.