ಬೆಂಗಳೂರು : ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಡಿಸೆಂಬರ್ 03, 2024 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆ ಆಚರಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 47/3 ರಂತೆ ಪ್ರತಿ ವರ್ಷ ಡಿಸೆಂಬರ್ – 03 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆ ಆಚರಿಸಲು ನಿರ್ಣಯವಾಗಿದೆ.
ವಿಶ್ವ ವಿಶೇಷ ಚೇತನರ ದಿನಾಚರಣೆಯ ಉದ್ದೇಶಗಳು:
ವಿಶೇಷ ಚೇತನರ ಸಮಸ್ಯೆಗಳನ್ನು ಅರಿಯುವುದು ಮತ್ತು ಇವರ ಆತ್ಮಗೌರವನ್ನು ಹೆಚ್ಚಿಸುವ, ಹಕ್ಕುಗಳನ್ನು ರಕ್ಷಿಸುವ ಮತ್ತು ಇವರ ಒಳಿತಿಗಾಗಿ ಕ್ರಮವಹಿಸುವುದಾಗಿದೆ.
ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ಸೇರಿಸುವ ಕುರಿತು ಜಾಗೃತಿ, ಸಮಾನ ಅವಕಾಶ, ಸೌಲಭ್ಯ ಕಲ್ಪಿಸುವುದು.
ವಿಶೇಷ ಚೇತನರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳನ್ನು ಒದಗಿಸುವುದು ಮತ್ತು ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.
ಪ್ರತಿ ವರ್ಷದಂತೆ, 2024-25 ನೇ ಸಾಲಿನಲ್ಲಿಯೂ ಡಿಸೆಂಬರ್- 03 ರಂದು ಶಾಲಾ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ವಿಶ್ವವಿಶೇಷ ಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು.
ಶಾಲಾ ಹಂತದಲಿ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು
ಪೂರ್ವಭಾವಿಯಾಗಿ ಚಟುವಟಿಕೆ/ ಕಾರ್ಯಕ್ರಮಗಳನ್ನು ಯೋಜಿಸಿ, ಅಗತ್ಯ ಸಿದ್ಧತೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವುದು.
ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ನ್ಯೂನ್ಯತೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಇಂತಹ ವಿದ್ಯಾರ್ಥಿಗಳಿಗೆ ಕಲಿಕಾ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೀಡಬೇಕಾದ ಸಹಕಾರದ ಕುರಿತು ಅರಿವು ಮೂಡಿಸುವುದು, ಈ ಕುರಿತು ಮುಕ್ತ ಚರ್ಚೆಗೆ ಅವಕಾಶ ಒದಗಿಸುವುದು.
ಶಾಲಾ ಹಂತದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸಿ, ಅವರಿಗೆ ಅವಕಾಶ ನೀಡುವುದು. ಉದಾ: ಅವರಲ್ಲಿನ ಕಲೆ, ಸೃಜನಶೀಲತೆ, ನಾವಿನ್ಯತೆ, ಕ್ರೀಡಾ ಕೌಶಲ ಇತ್ಯಾದಿ.
ವಿಶೇಷ ಚೇತರನ್ನು ಗೌರವಿಸುವ, ಸಮಾನ ಅವಕಾಶ ನೀಡುವ ಕುರಿತು ಎಲ್ಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.
ಜಿಲ್ಲಾ ಉಪನಿರ್ದೇಶಕರು ಹಂತದಲ್ಲಿ (ಆಡಳಿತ) ಮತ್ತು ಬ್ಲಾಕ್ ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸುವುದು. ಸಹಭಾಗಿ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. RDPR ಹಾಗೂ ಸ್ಥಳೀಯ ಸಂಸ್ಥೆಗಳು, ದಾನಿಗಳು, ಸಂಘ ಸಂಸ್ಥೆಗಳ ಸಹಕಾರ ಹಾಗೂ ವಾಲ್ಗೊಳ್ಳುವಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವುದು. ಕ್ಲಸ್ಟರ್ ಹಂತದಲ್ಲಿಯೂ ಆಚರಿಸಲು ಕ್ರಮವಹಿಸುವುದು.
ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು:-
ವಿಶ್ವ ವಿಶೇಷ ಚೇತನ ದಿನಾಚರಣೆ ಸಂದರ್ಭದಲ್ಲಿ ಕ್ರೀಡಾ, ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ವಿಶೇಷ ಚೇತನರನ್ನು ಗೌರವಿಸುವುದು.
ವಿಶೇಷ ಚೇತನ ಮಕ್ಕಳ ಕಲಿಕೆಗೆ ಗಮನಾರ್ಹ ಸಹಕಾರ ನೀಡಿರುವ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರ ಸಾಧನೆಗೆ ಬೆಂಬಲಿಸಿರುವ, ಶಾಲೆಯಲ್ಲಿ ತಡೆಮುಕ್ತ ವಾತಾವರಣ ನಿರ್ಮಿಸಿ ವಿಶೇಷ
ಚೇತನ ಸ್ನೇಹಿ ವಾತಾವರಣ ನಿರ್ಮಿಸಿರುವ ಶಿಕ್ಷಕರನ್ನು ಗೌರವಿಸುವುದು.
ಕ್ರೀಡಾ, ಸಾಹಿತ್ಯಕ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವುದು. ಇದಕ್ಕೆ ಸ್ಥಳೀಯ ಸಂಸ್ಥೆಗಳ ದಾನಿಗಳ ಸಹಕಾರ ಪಡೆಯುವುದು.
ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ತಂದಿರುವ, ಅವರಿಗೆ ಅವಕಾಶಗಳನ್ನು ನೀಡಿರುವ ಸಂಸ್ಥೆಗಳ/ ವ್ಯಕ್ತಿಗಳ ಯಶೋಗಾಥೆಯನ್ನು ಹಂಚಿಕೊಳ್ಳುವುದು, ಅವರನ್ನು ಗೌರವಿಸುವುದು.
ಸಮುದಾಯದವರಿಗೂ ಸಹ ವಿಶೇಷ ಅಗತ್ಯವುಳ್ಳವರ ಕುರಿತು ಮಾಹಿತಿ ನೀಡುವುದು, ಅವರಲ್ಲಿಯೂ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ಸ್ಥಳೀಯ ಪರಿಸರಕ್ಕೆ ತಕ್ಕಂತೆ, ಕಾರ್ಯಕ್ರಮ/ಚಟುವಟಿಕೆಗಳನ್ನು ಆಯೋಜಿಸುವುದು ಹಾಗೂ ಈ ಕುರಿತು ಸಾಕಮ್ಮ ಪೂರ್ವಭಾವಿಯಾಗಿ ಯೋಜಿಸಿ, ಯಾವುದೇ ಹಂತದಲ್ಲಿ ಲೋವವಾಗದಂತೆ, ಯಾವುದೇ
ವಿದ್ಯಾರ್ಥಿಯ ಘನತೆಗೆ ಚ್ಯುತಿ ಬಾರದಂತೆ ಮುಂಜಾಗ್ರತೆ ವಹಿಸುವುದು.
ವಿಶ್ವವಿಶೇಷ ಚೇತನರ ದಿನಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸಿ, ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ವಿವಿಧ ಹಂತದಲ್ಲಿ ನಡೆದ ಆಯ್ಕೆ ಕಾರ್ಯಕ್ರಮದ ಫೋಟೋ ಸಹಿತ ವರದಿಯನ್ನು ರಾಜ್ಯ ಕಚೇರಿಯ email ID : cwsnkar2020@gmail.com ಗೆ ಮೇಲ್ ಮೂಲಕ ವರದಿ ಸಲ್ಲಿಸುವುದು.