ಬೆಂಗಳೂರು: ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಚಿವಾಲಯದ ನೌಕರರಿಗಾಗಿಯೇ ವಿಶೇಷ ಇವಿ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, “ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನಿರ್ದೇಶನದಂತೆ ಸಚಿವಾಲಯದ ನೌಕರಿಗಾಗಿಯೇ 2025ರ ಜನವರಿಯಲ್ಲಿ ವಿಶೇಷ ಇವಿ ಮೇಳ ಆಯೋಜಿಸಲಾಗುವುದು. ಇಂಧನ ಸಚಿವ ಕೆ.ಜೆ.ಜಾರ್ಜ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಮೇಳ ನಡೆಯಲಿದೆ” ಎಂದರು.
“ಇವಿ ದ್ವಿಚಕ್ರ ವಾಹನ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಇವಿ ವಾಹನಗಳ ಬಳಕೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಸರ್ಕಾರಿ ನೌಕರರು, ವಿಶೇಷವಾಗಿ ಸಚಿವಾಲಯ ನೌಕರರಿಗೆ ಮಾರಾಟಗಾರರಿಂದ ರಿಯಾಯ್ತಿ ದರದಲ್ಲಿ ಇವಿ ದ್ವಿಚಕ್ರ ವಾಹನಗಳನ್ನು ಒದಗಿಸುವುದು ಈ ಮೇಳದ ಉದ್ದೇಶವಾಗಿದೆ. ಪ್ರದರ್ಶನ ಸ್ಥಳದಲ್ಲೇ ಪ್ರಾಯೋಗಿಕವಾಗಿ ವಾಹನ ಓಡಿಸಲು ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
“ಏರುತ್ತಿರುವ ವಾಹನಗಳ ಇಂಧನ ದರ, ನಗರದ ವಾಯುಮಾಲಿನ್ಯ ತಡೆಗೆ ಇವಿ ವಾಹನಗಳ ಬಳಕೆಯೇ ಪರಿಹಾರ. ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಸಹ ಇರುವುದಿಲ್ಲ. ಸಚಿವಾಯ ನೌಕರರಿಗೆ ಡೌನ್‌ಪೇಮೆಂಟ್ ಇಲ್ಲದೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ. ಮೇಳದಲ್ಲಿ ಭಾಗವಹಿಸಲು ಇವಿ ಸಂಸ್ಥೆಗಳು ಆಸಕ್ತಿ ತೋರಿದ್ದು, ಈ ಮಾರಾಟ ಕೇವಲ ಮೇಳಕ್ಕೆ ಸೀಮಿತವಾಗಿರದೇ ಮುಂದಿನ ದಿನಗಳಲ್ಲೂ ವಿಶೇಷ ಮಾರಾಟ ಮುಂದುವರಿಸಲಿದ್ದಾರೆ” ಎಂದು ವಿವರಿಸಿದರು.
“ರಾಜ್ಯ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಇವಿ ಬಳಕೆದಾರರಿದ್ದಾರೆ. ಅದಕ್ಕೆ ಪೂರಕವಾಗಿ ಇಂಧನ ಇಲಾಖೆ ಅಗತ್ಯ ಮೂಲ ಸೌಕರ್ಯ ಒದಗಿಸಿದೆ. ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಚಾರ್ಚಿಂಗ್ ಮೂಲಸೌಕರ್ಯ ಕಲ್ಪಿಸಿರುವ ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ ಸಂದಿರುವುದನ್ನು ಸ್ಮರಿಸಬಹುದು. ದೇಶದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದಾಗಿದ್ದು, ಒಟ್ಟು 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇವಿ ವಾಹನಗಳ ಬಳಕೆದಾರರು ಚಾರ್ಚಿಂಗ್ ಸ್ಟೇಷನ್ ಹಾಗೂ ಇವಿ ಮಿತ್ರ ಆ್ಯಪ್ ಪ್ರಯೋಜನ ಪಡೆಯುವಂತೆ ವಿನಂತಿಸುತ್ತೇನೆ” ಎಂದರು.
ವಿಶೇಷ ಇವಿ ಮೇಳ ಆಯೋಜಿಸುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಮೇಳಕ್ಕೆ ಸಂಘದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಹೆಚ್.ಜೆ. ರಮೇಶ್, ಹಿರಿಯ ಅಧಿಕಾರಿಗಳು, ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳು, ಇವಿ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಾಧ್ಯಮಗಳ ಮುಂದಿನ ಚರ್ಚೆಯಿಂದ ರಾಜಕೀಯ ನಡೆಯುವುದಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್
BIG NEWS : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ : ತನಿಖೆಯಲ್ಲಿ ಸ್ಪೋಟಕ ಅಂಶ ಬಹಿರಂಗ!