ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ನಮ್ಮ ದೇಶಕ್ಕೆ ಕೊಟ್ಟಿರುವ ಸಂವಿಧಾನವನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಸಮ್ಮೇಳನ ಸಭಾಂಗಣದ ಉದ್ಘಾಟನೆ ಹಾಗೂ ಸಂವಿಧಾನ ದಿನಾಚರಣೆಯನ್ನು ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡಿ, ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದಲ್ಲೇ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ. ಸಂವಿಧಾನ ರಚನಾ ಸಮಿತಿಯಲ್ಲಿ ಅಂಗೀಕಾರವಾಗಿ ಇಂದಿಗೆ 75 ವರ್ಷಗಳು ತುಂಬಿದೆ ಎಂದರು.
1949 ನವೆಂಬರ್ 26 ರಂದು ಸಂವಿಧಾನವು ರಚನಾ ಸಮಿತಿಯಲ್ಲಿ ಅಂಗೀಕಾರವಾದರೂ, ಜಾರಿಗೆ ಬಂದಿದ್ದು 1950 ಜನವರಿ 26 ರಂದು. ಸಂವಿಧಾನ ಜಾರಿಯಾಗಿ ಬಹಳ ದೀರ್ಘಕಾಲ ಚಾಲ್ತಿಯಲ್ಲಿರುವ ಸಂವಿಧಾನ ಅಂದರೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ 1949 ನವೆಂಬರ್ 25 ರಂದು ಕೆಲವು ಎಚ್ಚರಿಕೆ ಮಾತುಗಳನ್ನು ನಮ್ಮೆಲ್ಲರಿಗೂ ಹೇಳಿದ್ದಾರೆ. ಅದೇನೆಂದರೆ, ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರು, ಒಳ್ಳೆಯದ್ದಾಗಿದ್ದರೂ, ಕೆಟ್ಟವರ ಕೈ ಸೇರಿದರೆ ಕೆಟ್ಟದ್ದಾಗುತ್ತದೆ. ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯದಾಗುತ್ತದೆ. ಸರ್ಕಾರ ನಡೆಸುವವರು ಒಳ್ಳೆಯವರಾಗಿದ್ದರೆ ಸಂವಿಧಾನ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಸಂವಿಧಾನ ವಿರೋಧಿಗಳ ಕೈಯಲ್ಲಿ ಆಡಳಿತವಿದ್ದರೆ ಸಂವಿಧಾನದ ಆಶಯಗಳು ಈಡೇರುವುದಿಲ್ಲ ಎಂದರು.
ಸಂವಿಧಾನ ರಚನಾ ಸಮಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊನೆಯದಾಗಿ ಐತಿಹಾಸಿಕ ಭಾಷಣ ಮಾಡಿದ್ದಾರೆ. ಅದು ನಮಗೆ ಎಚ್ಚರಿಕೆಯ ಸಂಕೇತವಾಗಿದೆ. ಒಂದು ಮತ ಒಂದು ಮೌಲ್ಯ. ಅಧ್ಯಕ್ಷರಿಂದ ಹಿಡಿದು ಕೆಳಹಂತದ ಜನರಿಗೂ ಒಂದೇ ಮೌಲ್ಯ ಇರುವಂತಹ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಎಲ್ಲಾ ಜನರಲ್ಲೂ ಇಲ್ಲ. 1950 ಜವರಿ 26 ರಂದು ವೈರುದ್ಯತೆ ಇರುವಂತಹ ಸಮಾಜಕ್ಕೆ ಕಾಲಿಟ್ಟಿದ್ದೇವೆ. ಇಂದು ನಮ್ಮಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಅಸಮಾನತೆ ಇದೆ. ಈ ಆರ್ಥಿಕ, ಸಾಮಾಜಿಕ, ರಾಜಕೀಯವಾದ ಸ್ವಾತಂತ್ರ್ಯ ಸಿಕ್ಕಿದರೆ ಮಾತ್ರ ಸಾರ್ಥಕವಾಗುವುದಿಲ್ಲ, ರಾಜಕೀಯ ಸಾಮಾಜಿಕದ ಜೊತೆಗೆ, ಆರ್ಥಿಕ ಸ್ವಾತಂತ್ರ್ಯ, ಸಮಾನತೆ ನ್ಯಾಯ, ಭ್ರಾತೃತ್ವ ಎಂದು ಸ್ಪಷ್ಟವಾಗಿ ಸಂವಿಧಾನದಲ್ಲಿ ಹೇಳಿದ್ದಾರೆ. ಇವುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಸಾಮಾಜಿಕ ವ್ಯವಸ್ಥೆ ಇರುವ ಸಮಾಜವನ್ನು ಕಟ್ಟಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿದೆ ಎಂದರು.
ಡಾ.ಹೆಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾದ ಮೇಲೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಗುತ್ತಿದೆ ಹಾಗೂ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳು ಇದ್ದಾರೆ. ಸಂವಿಧಾನ ಅಂಗೀಕಾರವಾದ ಮೇಲೂ ವಿರೋಧಿಸಿದವರು ಇದ್ದಾರೆ ಎಂದರು.
ಜಗತ್ತಿನ ಎಲ್ಲಾ ಸಂವಿಧಾನವನ್ನು ಅಭ್ಯಾಸ ಮಾಡಿ, ಅನುಭವದ ಆಧಾರದ ಮೇಲೆ ನಮ್ಮ ದೇಶದಲ್ಲಿ ಸಂವಿಧಾನವನ್ನು ರಚನೆ ಮಾಡಲು ಸಾದ್ಯವಾಯಿತು. ಇದು ಒಂದು ಲಿಖಿತ ಸಂವಿಧಾನವಾಗಿದೆ. ಸಂವಿಧಾನ ರಚನೆಗಿಂತ ಮೊದಲು ಅಲಿಖಿತ ಸಂವಿಧಾನ ಇದ್ದು, ಸಾಮಾಜಿಕ, ಆರ್ಥಿಕ ಅಸಮಾನತೆ ಮತ್ತು ಜಾತಿ ಬೇಧವಿತ್ತು. ಅಸ್ಪøಶ್ಯರು ಶಿಕ್ಷಣ ಕಲಿಯಲು ಅವಕಾಶ ಇರಲಿಲ್ಲ. ಸಂವಿಧಾನ ಬರುವ ಮುಂಚೆ ಯಾವ ವ್ಯವಸ್ಥೆ ಇತ್ತು ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ಅಲಿಖಿತ ಸಂವಿಧಾನ ಎನ್ನುತ್ತೇವೆ ಎಂದರು.
ಡಾ.ಬಿಆರ್.ಅಂಬೇಡ್ಕರ್ ಅವರು ಹೇಳಿದಂತೆ ಯಾರಿಗೆ ಇತಿಹಾಸ ಗೊತ್ತಿಲ್ಲ ಅವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗಬೇಕಾದರೆ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸಬಲತೆ ಬಂದಾಗ ಮಾತ್ರ ಸಾಧ್ಯ. ಸಮಾನತೆ ಸಾಮಾಜಿಕ ನಿರ್ಮಾಣಕ್ಕೆ ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಇರಬೇಕು ಎಂದರು.
ನಮ್ಮ ಸರ್ಕಾರ ಸಂವಿಧಾನದ ಆಶಯವನ್ನು ಅರಿತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ನಾನು 1994 ರಲ್ಲಿ ಹಣಕಾಸು ಸಚಿವನಾಗಿದ್ದಾಗ ವಸತಿ ಶಾಲೆ ನಿರ್ಮಿಸಲಾಗಿತ್ತು. ಈಗ ಗುಣಮಟ್ಟದ ಶಿಕ್ಷಣ ನೀಡಲು 821 ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿಯಲ್ಲೂ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದೆಂದರು.
ಗುಣಮಟ್ಟದ ಶಿಕ್ಷಣ ವಿಲ್ಲದೆ ವೈಚಾರಿಕತೆ ಬೆಳೆಯಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ ಈ ಸಮಾಜಕ್ಕೆ ಅಂಟಿದ ರೋಗ. ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಬರದೆ ಇದ್ದರೆ ಅದು ಹೋಗುವುದಿಲ್ಲ. ಮಕ್ಕಳಲ್ಲಿ ಜಾತಿಯ ಸೋಂಕು ತಗಲದಂತೆ, ವೈಚಾರಿಕತೆ-ವೈಜ್ಞಾನಿಕತೆ ಬೆಳೆಯುವಂತೆ ನೋಡಿಕೊಳ್ಳಬೇಕು. ಪ್ರತಿಭೆಯನ್ನು ವಿಕಸನಗೊಳಿಸಲು ಶಿಕ್ಷಣ ಅತ್ಯಗತ್ಯ. ಉತ್ತಮ ಶಿಕ್ಷಣ ಸಿಗದೆ ಹೋದರೆ ಮಾನವರಾಗಲು ಸಾಧ್ಯವಿಲ್ಲ. ಕುವೆಂಪು ಅವರು ಹೇಳಿದಂತೆ ಮಕ್ಕಳು ಹುಟ್ಟುವಾಗಲೇ ವಿಶ್ವಮಾನವರಾಗಿ ಹುಟ್ಟುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯ ಪರಿಣಾಮವಾಗಿ ಬೆಳೆಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದರು.
ಸಂವಿಧಾನ ದಿನಾಚರಣೆ ಆಚರಿಸುವ ಈ ದಿನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದೇ ನಾವು ಸಂವಿಧಾನಕ್ಕೆ ಸಲ್ಲಿಸುವ ಗೌರವ. ನಾನು ಇಂದು ಮುಖ್ಯಮಂತ್ರಿಯಾಗಿದ್ದೇನೆ ಎಂದರೆ ಇದೇ ಸಂವಿಧಾನದಿಂದ. ಸಂವಿಧಾನವು ಎಲ್ಲರಿಗೂ ರಾಜಕೀಯ, ಆರ್ಥಿಕ, ಸಾಮಾಜಿಕ ಶಕ್ತಿ ತುಂಬುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರು 2023ನೇ ಸಾಲಿನಲ್ಲಿ ಏರ್ಪಡಿಸಿದ್ದ ಸಂವಿಧಾನ ಪೀಠಿಕೆ ವಾಚನದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಜನ ಭಾಗವಹಿಸಿ ಪೀಠಿಕೆ ವಾಚನ ಮಾಡಿದ್ದರು. ಇದಕ್ಕಾಗಿ ಸಮಾಜ ಕಲ್ಯಾಣಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರಿಗೆ ವಲ್ರ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕ್ರೈಸ್ಟ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವೆಬ್‍ಸೈಟ್ ಲೋಕಾರ್ಪಣೆ ಮಾಡಿದರು. ಕ್ರೈಸ್ಟ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಅನುಕೂಲವಾಗಲು ಟ್ಯಾಬ್‍ಗಳನ್ನು ವಿತರಿಸಿದರು.
2023 ಹಾಗೂ 2024ರಲ್ಲಿ ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಂಘಗಳ ಸಾಧಕರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಇಡೀ ವಿಶ್ವಕ್ಕೆ ನಮ್ಮ ಸಂವಿಧಾನ ಮಾದರಿ ಹಾಗೂ ಮುಂದಿನ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳಿಗೆ ಅಡಿಪಾಯ. ನಮ್ಮ ರಕ್ಷಣೆ, ಬದುಕಿಗೆ ಮಹತ್ವದ ಬದಲಾವಣೆ ನೀಡಿರುವ ಸಂವಿಧಾನಕ್ಕೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೊಸ ರೂಪ ನೀಡಿದ್ದಾರೆ. ಸಂವಿಧಾನ ಒಂದು ಗ್ರಂಥ ಇದ್ದಂತೆ, ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮ ಧರ್ಮಗಳನ್ನು ರಕ್ಷಣೆ ಮಾಡುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಾಜಕಾರಣಿಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ ನೀನು ಹೋರಾಟ ಮಾಡದಿದ್ದರು ಚಿಂತೆ ಇಲ್ಲ. ಮಾರಾಟವಾಗಬೇಡಿ ಎಂದಿದ್ದಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಬೀದರ್‍ನಿಂದ ಚಾಮರಾಜನಗರದ ವರೆಗೆ ಪ್ರಜಾಪ್ರಭುತ್ವದ ಮಾನವ ಸರಪಳಿ ನಿರ್ಮಿಸಿದ್ದೇವೆ. ಸಂವಿಧಾನ ದಿನಾಚರಣೆ ಕಾರ್ಯಕ್ರಮವು ಸಂವಿಧಾನ ಜಾಗೃತಿ ಸಮ್ಮೇಳನವಾಗಿದ್ದು, ಭಾರತೀಯರಾದ ನಮೆಲ್ಲರಿಗೂ ಇದು ಐತಿಹಾಸಿಕ ಹಾಗೂ ಹೆಮ್ಮೆಯ ದಿನ. 75 ವರ್ಷದ ಹಿಂದೆ ನಾವು ದೇಶದಲ್ಲಿ ಹೇಗೆ ಇದ್ದೆವು ಎಂದು ಒಮ್ಮೆ ಅವಲೋಕಿಸಬೇಕು ಎಂದರು.
ಸಂವಿಧಾನವನ್ನು ಇಂದು ಯಾರೇ ವಿರೋಧಿಸಲು ಬಯಸಿದ್ದರೋ ಅವರೆ ಸಂವಿಧಾನವನ್ನು ಭದ್ರವಾಗಿ ಅಳವಡಿಸಿಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಎಲ್ಲರೂ ಸೌಹಾರ್ದತೆಯಿಂದ-ಸಹಭಾಗಿತ್ವದಿದಿಂದ ಭಾಗವಹಿಸಬೇಕು. ಸರ್ವಾಧಿಕಾರ ಧೋರಣೆ, ಜಾತೀಯತೆಗೆ ಇರುವವರಿಗೆ ಇಲ್ಲಿ ಅವಕಾಶ ಇಲ್ಲ. ಎಲ್ಲರೂ ಸಂವಿಧಾನವನ್ನು ರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಸುರೇಶ್(ಬೈರತಿ), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಾ.ಕೆ ಗೋವಿಂದರಾಜು, ನಸೀರ್ ಅಹಮದ್, ವಿಧಾನ ಪರಿಷತ್ ಶಾಸಕರುಗಳಾದ ಯು.ಬಿ.ವೆಂಕಟೇಶ್, ಡಾ.ತಿಮ್ಮಯ್ಯ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್ ರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್, ಎಸ್‍ಸಿಪಿ/ಟಿಎಸ್‍ಪಿ ಸಲಹೆಗಾರ ವೆಂಕಟೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತರಾದ ಡಾ. ರಾಕೇಶ್ ಕುಮಾರ್. ಕೆ. ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.