ಶಿವಮೊಗ್ಗ: ರಾಜ್ಯದಲ್ಲಿ ಇನ್ನೂ ಜೀವಂತ ಎನ್ನುವಂತೆ ಜಿಲ್ಲೆಯಲ್ಲಿಲ ಬಹಿಷ್ಕಾರ ಪದ್ದತಿ ಮುಂದುವರೆದಿದೆ. ಈ ಕುಟುಂಬವನ್ನು ಮಾತನಾಡಿಸಿದ್ರೇ, ಅವರ ಮನೆಗೆ ಹೋದ್ರೆ, ಸಂಪರ್ಕ ಇಟ್ಟುಕೊಂಡ್ರೇ 5,000 ದಂಡವನ್ನು ವಿಧಿಸಲಾಗುತ್ತಂತೆ. ಹೀಗಾಗಿ ನಮಗೆ ದಯಾ ಮರಣ ಕಲ್ಪಿಸುವಂತೆ ಕುಟುಂಬ ತಾಲ್ಲೂಕು, ಜಿಲ್ಲಾಡಳಿತ, ಮುಖ್ಯಮಂತ್ರಿ, ಡಿಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಡಸೂರು ಗ್ರಾಮದಲ್ಲೇ ಇಂತಹ ಅನಿಷ್ಟ ಪದ್ದತಿಯೊಂದು ಜೀವಂತವಿದೆ. ಅದೇ ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಡಸೂರು ಗ್ರಾಮದಲ್ಲಿ. ಈ ಗ್ರಾಮದ ಎಂ.ಕೆ ಹುಚ್ಚಪ್ಪ, ಪತ್ನಿ ಹುಚ್ಚಮ್ಮ ಹಾಗೂ ಪುತ್ರ ಎಂ.ಹೆಚ್ ವೀರೇಂದ್ರ ಅವರಿಗೆ ಮಡಸೂರು ಗ್ರಾಮಸ್ಥರು ಬಹಿಷ್ಕಾರ ಹಾಕಿ, ತೊಂದರೆ ಕೊಡುತ್ತಿರೋ ಆರೋಪ ಕೇಳಿ ಬಂದಿದೆ.
ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳೋಕೆ ಅಂದು ಅವಕಾಶ, ಇಂದು ತೊಂದ್ರೆ
ಮಂಡಸೂರು ಗ್ರಾಮದ ಸರ್ವೆ ನಂ.60ರಲ್ಲಿ ಸುಮಾರು 22 ಎಕರೆ 28 ಗುಂಟೆ ಸರ್ಕಾರಿ ಜಾಗವಿದೆ. ಈ ಜಾಗವನ್ನು 2018ರಲ್ಲೇ ಗ್ರಾಮ ಸಮಿತಿಯ ತೀರ್ಮಾನಿಸಿ ಗ್ರಾಮದ ಎಂಟತ್ತು ಕುಟುಂಬಗಳಿಗೆ ಹಂಚಿಕೆ ಕೂಡ ಮಾಡಲಾಗಿತ್ತು. ಈ ಸರ್ಕಾರಿ ಭೂಮಿಯಲ್ಲಿ ಎಂ.ಕೆ ಹುಚ್ಚಪ್ಪ ಅವರಿಗೂ ಮನೆ ಕಟ್ಟಿಕೊಳ್ಳೋದಕ್ಕೆ 150×200 ಅಡಿಯನ್ನು ಹಂಚಿಕೆ ಮಾಡಲಾಗಿತ್ತು.
ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಮಡಸೂರು ಗ್ರಾಮದ ಅನೇಕರು ಮನೆ, ತೋಟವನ್ನು ಮಾಡಿಕೊಂಡು ವಾಸಿಸುತ್ತಿದ್ದಾರೆ. ಆದರೇ ಈಗ ಎಂ.ಕೆ ಹುಚ್ಚಪ್ಪ ಹಾಗೂ ಹಾಲಿ ಪಡವಗೋಡು ಗ್ರಾಮ ಪಂಚಾಯ್ತಿ ಸದಸ್ಯ ಮತ್ತು ಮಾಜಿ ಉಪಾಧ್ಯಕ್ಷ ಎಂ.ಹೆಚ್. ವೀರೇಂದ್ರ ಅವರು ಮನೆ ನಿರ್ಮಿಸೋದಕ್ಕೆ ಮುಂದಾಗಿದ್ದರೇ, ಗ್ರಾಮಸ್ಥರು ಅಡ್ಡಿ ಮಾಡುತ್ತಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸುತ್ತಾರೆ.
ಮನೆ ಕಟ್ಟಿಕೊಳ್ಳೋದಕೆ ಬಿಡ್ತಿಲ್ಲ ಸ್ವಾಮಿ… ಇಂಜೆಕ್ಷನ್ ಆರ್ಡರ್ ಇದ್ರೂ ತಪ್ಪಿಲ್ಲ ಕಿರಿಕಿರಿ
ಗ್ರಾಮಸ್ಥರ ಕಿರಿಕಿರಿ ತಾಳಲಾರದೇ ಎಂ.ಹೆಚ್ ವೀರೇಂದ್ರ ಅವರ ಕುಟುಂಬಸ್ಥರು ಸಾಗರ ನ್ಯಾಯಾಲಯದ ಮೊರೆ ಹೋಗಿ ಮನೆ ಕಟ್ಟಲು ಅವಕಾಶವಿದ್ದರೂ, ಕೃಷಿ ಚಟುವಟಿಕೆಗಳಿಗೆ ಭೂಮಿಯನ್ನು ಬಳಕೆ ಮಾಡಲು ಅಡ್ಡಿಪಡಿಸದಂತೆ ಇಂಜೆಕ್ಷನ್ ಆರ್ಡರ್ ಕೂಡ ಪಡೆದಿದ್ದಾರೆ. ಹೀಗಿದ್ದರೂ ಮಡಸೂರು ಗ್ರಾಮಸ್ಥರಿಂದ ಎಂ.ಕೆ ಹುಚ್ಚಪ್ಪ ಅವರ ಕುಟುಂಬಕ್ಕೆ ತೊಂದರೆ ಕೊಡುವುದು ಮಾತ್ರ ತಪ್ಪಿಲ್ಲವಂತೆ.
ಇವರೊಂದಿಗೆ ಮಾತಾಡಿದ್ರೆ 5,000 ದಂಡವಂತೆ
ಮಡಸೂರು ಗ್ರಾಮದ ಜನರು ಎಂ.ಕೆ ಹುಚ್ಚಪ್ಪ, ಅವರ ಪತ್ನಿ ಹುಚ್ಚಮ್ಮ ಹಾಗೂ ಪುತ್ರ ಎಂ.ಹೆಚ್. ವೀರೇಂದ್ರ ಅವರೊಂದಿಗೆ ಮಾತನಾಡದಂತೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ. ಒಂದು ವೇಳೆ ಯಾರಾದರೂ ಅವರೊಂದಿಗೆ ಮಾತನಾಡಿದರೇ 5,000 ದಂಡ ವಿಧಿಸೋದಾಗಿ ಎಚ್ಚರಿಕೆ ನೀಡಿದ್ದಾರೆ ಅಂತ ಎಂ.ಕೆ ಹುಚ್ಚಪ್ಪ ಹಾಗೂ ಪುತ್ರ ಎಂ.ಹೆಚ್.ವೀರೇಂದ್ರ ಆರೋಪಿಸಿದ್ದಾರೆ.
ನಮ್ಮ ಇಡೀ ಕುಟುಂಬಕ್ಕೆ ಸಮಾಜಿಕ ಬಹಿಷ್ಕಾರದಿಂದ ಬೇಸತ್ತು ಹೋಗಿದೆ. ಸರ್ಕಾರಿ ಜಮೀನಿನಲ್ಲಿ ಮಡಸೂರು ಗ್ರಾಮಸ್ಥರೆಲ್ಲ ಮನೆ, ತೋಟ ಮಾಡಿಕೊಂಡು ಜೀವಿಸುತ್ತಿದ್ದಾರೆ. ಆದರೇ ನಾವು ಈಗ ಮನೆ ಕಟ್ಟಿಕೊಳ್ಳೋಕೆ ಹೋದ್ರೆ ಬಿಡುತ್ತಿಲ್ಲ. ಬದುಕಿದ್ದು ಸತ್ತಂತೆ ನಮ್ಮ ಕುಟುಂಬ ವಾಸಿಸುತ್ತಿದೆ. ಈ ಬಗ್ಗೆ ಸಾಗರ ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ಕುಟುಂಬಕ್ಕೆ ದಯಾ ಮರಣ ಕರುಣಿಸುವಂತೆ ತಾಲ್ಲೂಕು ಆಡಳಿತಕ್ಕೆ ಎಂ.ಕೆ ಹುಚ್ಚಪ್ಪ, ಪತ್ನಿ ಹುಚ್ಚಮ್ಮ, ಪುತ್ರ ಎಂ.ಹೆಚ್. ವೀರೇಂದ್ರ ನೊಂದು ಮನವಿ ಮಾಡಿದ್ದಾರೆ.
ರಾತ್ರೋ ರಾತ್ರಿ ಲಾರಿಯ ಗ್ಲಾಸ್, ಹೆಡ್ ಲೈಟ್ ಹೊಡೆದು ಹಾಕಿ ದುಷ್ಕೃತ್ಯ
ಇನ್ನೂ ಎಂ.ಹೆಚ್.ವೀರೇಂದ್ರ ಅವರಿಗೆ ಸೇರಿದಂತ ಲಾರಿಯೊಂದನ್ನು ಗ್ರಾಮದಲ್ಲಿ ನಡೆಯುತ್ತಿದ್ದಂತ ವಾಟರ್ ಟ್ಯಾಂಕ್ ಕಾಮಗಾರಿಗೆ ಕೆಲಸಕ್ಕೆ ನೀಡಲಾಗಿತ್ತು. ಈ ಲಾರಿಯ ಮೇಲೆಯೇ ಕಿಡಿಗೇಡಿಗಳು ತಮ್ಮ ವಿರುದ್ಧದ ದ್ವೇಷಕ್ಕೆ ಗ್ಲಾಸ್, ಹೆಡ್ ಲೈಟ್ ಹೊಡೆದು ಹಾಕಿದ್ದಾರೆ. ಇದು ಮಡಸೂರು ಗ್ರಾಮದ ಕೆಲವರು ಮಾಡಿರೋ ಬಗ್ಗೆ ಮಾಹಿತಿ ಇದೆ. ಸಾಗರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಲಿದ್ದು, ತಪ್ಪಿ ತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಎಂ.ಹೆಚ್.ವೀರೇಂದ್ರ ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಮಡಸೂರು ಗ್ರಾಮ ಎಂ.ಕೆ ಹುಚ್ಚಪ್ಪ ಕುಟುಂಬಕ್ಕೆ ಗ್ರಾಮಸ್ಥರೇ ಬಹಿಷ್ಕಾರ ಹಾಕಿರೋದು ಖಂಡನೀಯ. ಅಲ್ಲದೇ ಮಡಸೂರು ಹಾಲಿ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವಂತ ಎಂ.ಹೆಚ್.ವೀರೇಂದ್ರ ಕುಟುಂಬವನ್ನು ಮಾತನಾಡಿಸಿದ್ರೇ 5,000 ದಂಡದ ಎಚ್ಚರಿಕೆ ನೀಡಿರೋದು ಖೇದಕರ. ಹೀಗಿದ್ದರೂ ಸಾಗರ ತಾಲ್ಲೂಕು ಆಡಳಿತ, ಶಿವಮೊಗ್ಗ ಜಿಲ್ಲಾಡಳಿತ ಮಾತ್ರ ಕಣ್ಣಿದ್ದು ಕುರುಡು, ಕಿವಿ ಇದ್ದೂ ಕಿವುಡಂತೆ ಸುಮ್ಮನಿರುವುದು ಮಾತ್ರ ಏಕೆ ಎಂಬುದೇ ಯಕ್ಷ ಪ್ರಶ್ನೆ. ಈ ಕೂಡಲೇ ರಾಜ್ಯದಲ್ಲಿ ಜೀವಂತವಿರುವಂತ ಈ ಬಹಿಷ್ಕಾರ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಗ್ರಾಮಸ್ಥರ ಕಿರಿಕಿರಿಗೆ ನೊಂದು ದಯಾ ಮರಣ ಕೇಳುವಂತ ಈ ಕುಟುಂಬಕ್ಕೆ ನ್ಯಾಯ ಒದಗಿಸಿಸೋ ಕೆಲಸವನ್ನು ಸಂಬಂಧಿಸಿದಂತ ಅಧಿಕಾರಿಗಳು, ಶಾಸಕರು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಅಲ್ಲ: ಮಗನ ಬಗ್ಗೆ ತಾಯಿ ಭಾವನಾತ್ಮಕ ಪೋಸ್ಟ್
GOOD NEWS: ರಾಜ್ಯಾಧ್ಯಂತ ಮತ್ತೆ ಅರ್ಹರ ‘BPL ಕಾರ್ಡ್’ ಆ್ಯಕ್ಟೀವ್: ಹಿಂದಿನ ತಿಂಗಳಂತೆ ‘ಪಡಿತರ ಧಾನ್ಯ’ ವಿತರಣೆ