ಬೆಂಗಳೂರು: 1876 ಜನ ಮಾತ್ರ ನನಗೆ ಓಟು ಹಾಕಿದ್ದು, ಶೇ. 99 ಮತದಾರರು ನಮ್ಮನ್ನು ಬೆಂಬಲಿಸಿಲ್ಲ. ಮತ ಹಾಕಿದ ಎಲ್ಲರಿಗೂ ನನ್ನ ನಮನಗಳು, ಧನ್ಯವಾದಗಳು. ನೀವು ಇಷ್ಟು ಜನರಾದರೂ ನಮ್ಮನ್ನು ಬೆಂಬಲಿಸಿದಿರಲ್ಲ ಎನ್ನುವುದೇ ಸದ್ಯದ ತೃಪ್ತಿ ಎಂಬುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ, ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಂತ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಇಂದು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ಶಿಗ್ಗಾವಿ-ಸವಣೂರಿನ ನಾಗರಿಕರು ಎಂದಿನಂತೆ ಶಿಗ್ಗಾವಿಯಲ್ಲಿರುವ KRS ಪಕ್ಷದ ಕಚೇರಿಗೆ ಬಂದು ತಮ್ಮ ನ್ಯಾಯಬದ್ಧ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಆದರೆ… ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರದ ಜನತೆ ಈ ಉಪಚುನಾವಣೆಯಲ್ಲಿ ನನ್ನನ್ನು ಮತ್ತು ನಮ್ಮ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಒಟ್ಟು #1876 ಜನ ಮಾತ್ರ ನನಗೆ ಓಟು ಹಾಕಿದ್ದು, ಶೇ. 99 ಮತದಾರರು ನಮ್ಮನ್ನು ಬೆಂಬಲಿಸಿಲ್ಲ. ಮತ ಹಾಕಿದ ಎಲ್ಲರಿಗೂ ನನ್ನ ನಮನಗಳು, ಧನ್ಯವಾದಗಳು. ನೀವು ಇಷ್ಟು ಜನರಾದರೂ ನಮ್ಮನ್ನು ಬೆಂಬಲಿಸಿದಿರಲ್ಲ ಎನ್ನುವುದೇ ಸದ್ಯದ ತೃಪ್ತಿ ಎಂದಿದ್ದಾರೆ.
ಈ ಬಾರಿಯ ಜನಾದೇಶ ನಮ್ಮ ಪರ ಇಲ್ಲದಿದ್ದರೂ, KRS ಪಕ್ಷದ ಕಚೇರಿ ಶಿಗ್ಗಾವಿಯಲ್ಲಿ ಮುಂದುವರೆಯಲಿದೆ ಮತ್ತು ನಾನೂ ಸಹ ತಿಂಗಳಲ್ಲಿ ಹತ್ತು-ಹದಿನೈದು ದಿನ ಕ್ಷೇತ್ರದಲ್ಲಿಯೇ ಉಳಿಯಲಿದ್ದೇನೆ. ಶಿಗ್ಗಾವಿ-ಸವಣೂರಿನ ನಾಗರಿಕರು ಎಂದಿನಂತೆ KRS ಪಕ್ಷದ ಕಚೇರಿಗೆ ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಆದರೆ… ಇಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷದ ಯಾಸೀರ್ ಅಹ್ಮದ್ ಖಾನ್ ಪಠಾಣರಿಗೆ ಮತ ನೀಡಿರುವ ಮತದಾರರು ನಮ್ಮಲ್ಲಿಗೆ ಬರುವ ಮೊದಲು ದಯವಿಟ್ಟು ಶಾಸಕರ ಅಧಿಕೃತ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಳ್ಳಿ. ಅಲ್ಲಿ ಅವರಿಂದ ಆಗಲಿಲ್ಲ ಎಂದರೆ ನಮ್ಮ ಕಚೇರಿಗೆ ಬನ್ನಿ, KRS ಪಕ್ಷದ ಸದಸ್ಯತ್ವ ಪಡೆಯಿರಿ. ನಿಮ್ಮ ಸಮಸ್ಯೆಗೆ ನ್ಯಾಯಬದ್ಧ ಪರಿಹಾರ ಕೊಡಿಸುವ ಕೆಲಸವನ್ನು ನಾವು ಖಂಡಿತ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು, ಎರಡನೇ ಸ್ಥಾನಕ್ಕೆ ಬಂದು ಸೋತಿರುವ ಬಿಜೆಪಿ ಪಕ್ಷದ ಭರತ್ ಬೊಮ್ಮಾಯಿಗೆ ಓಟು ಹಾಕಿರುವ ಮತದಾರರು ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ನಮ್ಮ ಬಳಿಗೆ ಬನ್ನಿ. ನೀವು ಯಾರಿಗೆ ಓಟು ಹಾಕಿದ್ದಿರೋ ಆವರು ಇಲ್ಲಿ ನಿಮ್ಮ ಕೈಗೆ ಸಿಗುವುದಿಲ್ಲ ಮತ್ತು ನಿಮ್ಮ ಸಮಸ್ಯೆ ಪರಿಹರಿಸುವುದಕ್ಕೆ ಅಥವ ಸ್ಪಂದಿಸುವುದಕ್ಕೆ ಅವರಿಗೆ ಮನಸ್ಸಿರುವುದಿಲ್ಲ ಎನ್ನುವುದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಹಾಗೆಂದು ನೀವು ಅನಾಥಪ್ರಜ್ಞೆಯನ್ನು ಅನುಭವಿಸುವ ಅಗತ್ಯವಿಲ್ಲ. ನಾವಿದ್ದೇವೆ. ನೇರವಾಗಿ ನಮ್ಮ ಕಚೇರಿಗೆ ಬನ್ನಿ. KRS ಪಕ್ಷದ ಸದಸ್ಯತ್ವ ಪಡೆಯಿರಿ. ನಿಮ್ಮ ಸಮಸ್ಯೆಗೆ ನ್ಯಾಯಬದ್ಧ ಪರಿಹಾರ ಕೊಡಿಸುವ ಕೆಲಸವನ್ನು ನಾವು ಖಂಡಿತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ನಮಗೆ ಓಟು ಹಾಕಿರುವ ಮತ್ತು ಈಗಾಗಲೇ KRS ಪಕ್ಷದ ಸದಸ್ಯತ್ವ ಪಡೆದಿರುವ ಜನರು, ಯಾರಿಗೂ ಅಂಜಬೇಕಿಲ್ಲ, ಯಾವುದಕ್ಕೂ ಅಳುಕಬೇಕಿಲ್ಲ. KRS ಪಕ್ಷದ ಕಚೇರಿ ನಿಮ್ಮದೇ. ನೀವೂ ನ್ಯಾಯ ಪಡೆಯಿರಿ ಮತ್ತು ಇತರೆ ಅಸಹಾಯಕ, ದುರ್ಬಲ, ಬಡಜನರಿಗೆ ಸಹಾಯ ಮಾಡಿ. ನಾಯಕತ್ವ ಬೆಳೆಸಿಕೊಳ್ಳಿ. ನಿಮ್ಮೊಂದಿಗೆ ನಾನಿದ್ದೇನೆ ಎಂದಿದ್ದಾರೆ.
ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣ ಎನ್ನುವುದು ಸುದೀರ್ಘ, ನಿರಂತರ ಪಯಣ. ಇಂದು ಇಡೀ ಕರ್ನಾಟಕದ ಚುನಾವಣಾ ರಾಜಕಾರಣ ಜಾತಿ, ಕೋಮು, ಹಣ, ಆಮಿಷ, ಅನೈತಿಕತೆಗಳ ಮೇಲೆ ನಡೆಯುತ್ತಿದೆ. ನ್ಯಾಯ, ನೀತಿ, ಧರ್ಮ, ಸಂವಿಧಾನವನ್ನು ಏಕಾಂಗಿಯಾಗಿಯಾದರೂ ಸರಿ ಎತ್ತಿಹಿಡಿಯುತ್ತೇನೆ ಎನ್ನುವವರ ಸಂಖ್ಯೆ ತೀರಾ ಕಡಿಮೆ; ಇಲ್ಲವೆಂದರೂ ಆದೀತು ಎಂದು ಹೇಳಿದ್ದಾರೆ.
ಇಂತಹ ದುರ್ಭರ ಸಂದರ್ಭದಲ್ಲಿ KRS ಪಕ್ಷವು ಯಾವುದೇ ಸಂವಿಧಾನಬಾಹಿರ ಮತ್ತು ಅನೈತಿಕ ಕೃತ್ಯಗಳನ್ನು ಮಾಡದೆ ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಬೇಕು, ಹಾಗಾದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎನ್ನುವ ದೊಡ್ಡ ಗುರಿ ಮತ್ತು ನಿಯಮಗಳನ್ನು ಹಾಕಿಕೊಂಡು ಹೋರಾಟ ಮಾಡುತ್ತಿದೆ. ತಾವೂ ಬದುಕಲು ಈ ವಿಚಾರಗಳು ಅನಿವಾರ್ಯವಾದಾಗ ಮಾತ್ರ ಜನ ನಮ್ಮನ್ನು ಬೆಂಬಲಿಸುತ್ತಾರೆ ಮತ್ತು ಅಂತಹ ದಿನ ಇಂದಲ್ಲ ನಾಳೆ ಬರಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಬೇಕು ಮತ್ತು ಎಲ್ಲಾ ಸಾಮಾನ್ಯ ಜನರಂತೆ ನಾವೂ ದಣಿಯಬೇಕು, ಸವೆಯಬೇಕು, ನೋಯಬೇಕು, ಸೋಲಬೇಕು ಎಂದಿದ್ದಾರೆ.
ಆದರೆ ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಶಿಗ್ಗಾವಿ ಉಪಚುನಾವಣೆಯನ್ನು ಎದುರಿಸಿದಂತೆ ಮುಂದಿನ ದಿನಗಳನ್ನು ಮತ್ತು ಹೋರಾಟಗಳನ್ನೂ ನಾನು ನಗುತ್ತಲೇ ಎದುರಿಸುತ್ತೇನೆ. ಮಿಕ್ಕದ್ದು ಜೊತೆಗಿರುವವರಿಗೆ ಮತ್ತು ಸಮಾಜಕ್ಕೆ ಬಿಟ್ಟದ್ದು.
ಅಂದಹಾಗೆ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಾಸೀರ್ ಅಹ್ಮದ್ ಖಾನ್ ಪಠಾಣರಿಗೆ ಅಭಿನಂದನೆಗಳು . ಕ್ಷೇತ್ರದ ಜನರಿಗೆ ಒಳ್ಳೆಯ ಕೆಲಸ ಮಾಡಲು ಅವರಿಂದ ಸಾಧ್ಯವಾಗಲಿ ಎಂದು ಹಾರೈಸುತ್ತೇನೆ. ಮತ್ತು, ಕಳೆದ ಐದು ತಿಂಗಳಿಂದ ನನ್ನ ಜೊತೆಗೂಡಿ ಕೆಲಸ ಮಾಡಿದ KRS ಪಕ್ಷದ ಎಲ್ಲಾ ಸೈನಿಕರಿಗೆ ಮತ್ತು ದೇಣಿಗೆ ಕೊಟ್ಟು ಬೆಂಬಲಿಸಿದ ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು. ಇದಿಷ್ಟೇ ನನ್ನಿಂದ ಸಾಧ್ಯ. ಯಾವುದೇ ರೀತಿಯಲ್ಲಿ ನನ್ನಿಂದ ಅಪಚಾರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ದಾರೆ.
ನಾನು ನಿಮ್ಮಲ್ಲಿ ಮೂಡಿಸಿರಬಹುದಾದ ಆಶಾವಾದ ಮತ್ತು ಮತ್ತಷ್ಟು ಉದ್ದೀಪಿಸಿರಬಹುದಾದ ಒಳ್ಳೆಯತನದಿಂದ ನಿಮ್ಮಲ್ಲಿ ಕೆಲವರಿಗೆ ಕಷ್ಟಗಳೂ ಎದುರಾಗಿರಬಹುದು. ಅದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ನನ್ನ ನಿಲುವು ಮತ್ತು ಆದರ್ಶಗಳು ಹೇಗೆ ಅಂತಿಮವಾಗಿ ನನ್ನ ಸ್ವಯಂಹೇರಿಕೆಯೋ, ನಿಮ್ಮವೂ ಸಹ ಅಂತಿಮವಾಗಿ ನಿಮ್ಮ ನಿರ್ಧಾರಗಳೇ. ಅವುಗಳ ಬಗ್ಗೆ ವಿಷಾದಿಸಬೇಡಿ, ಬದಲಿಗೆ ಹೆಮ್ಮೆ ಪಡಿ ಎಂದಷ್ಟೇ ಹೇಳಬಯಸುತ್ತೇನೆ.
ಕೊನೆಯಲ್ಲಿ ಹೇಳಬಯಸಿದ್ದು, ಕಳೆದ ಐದು ತಿಂಗಳು ಶಿಗ್ಗಾವಿ-ಸವಣೂರಿನ ಸಾವಿರಾರು ಜನ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಸ್ಪಂದಿಸಿದರು. ಅವರಲ್ಲಿ ಬಹುತೇಕರು ನಮಗೆ ಮತ ಹಾಕದೇ ಹೋಗಿರಬಹುದು ಮತ್ತು ಅದಕ್ಕೆ ಅವರದೇ ಆದ ಕಾರಣಗಳೂ ಇರಬಹುದು. ಆದರೆ ಪ್ರಚಾರದ ಸಮಯದಲ್ಲಿ ಸಾಮಾನ್ಯ ಜನರು ತೋರಿಸಿದ ಪ್ರೀತಿ ಮತ್ತು ಅಭಿಮಾನ ಬಹಳ ದೊಡ್ಡದು. ಕನಿಷ್ಠ ಈ ತೋರ್ಪಡಿಕೆಯ ಒಳ್ಳೆಯತನವೂ ನಮ್ಮ ರಾಜ್ಯದಲ್ಲಿ ಬಹಳ ಕಡೆ ಇಲ್ಲ. ಈ ಅಪರೂಪದ ಒಳ್ಳೆಯತನವನ್ನು ಶಿಗ್ಗಾವಿಯ ಜನ ಕಾಪಿಟ್ಟುಕೊಳ್ಳಲಿ ಮತ್ತು ಎಲ್ಲೆಡೆ ಹರಡಲಿ ಎಂದು ಆಶಿಸುತ್ತೇನೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ ಎಂದಿದ್ದಾರೆ.
BREAKING: ಪಾಕಿಸ್ತಾನದಲ್ಲಿ ಮತ್ತೆ ಕೋಮು ಹಿಂಸಾಚಾರ: 32 ಮಂದಿ ಸಾವು | Pakistan violence
ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS