ಶಿವಮೊಗ್ಗ: ರಾಬರಿ ಪ್ರಕರಣ ದಾಖಲಾದಂತ ಕೇವಲ 24 ಗಂಟೆಯಲ್ಲೇ ಆರೋಪಿಯ ಸುಳಿವು ಪತ್ತೆ ಹಚ್ಚಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು, ಅಷ್ಟೇ ವೇಗವಾಗಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡರು. ಕಳೆದ 10 ದಿನಗಳ ಹಿಂದೆ ಸಾಗರ ಗ್ರಾಮಾಂತರ ಠಾಣೆಯ ಕಲ್ಮನೆ ಗ್ರಾಮದ ಕುಂಬಾರಗುಂಡಿಯಲ್ಲಿನ ಒಂಟಿ ಮನೆಯಲ್ಲಿದ್ದಂತ ಮಹಿಳೆಯನ್ನು ಓರ್ವ ಆರೋಪಿ ಚಾಕು ತೋರಿಸಿ, ಮನೆಯ ಲಾಕರ್ ನಲ್ಲಿದ್ದಂತ ಬಂಗಾರದ ಮಾಂಗಲ್ಯ ಸರ, ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ದೂರಿನ ಸಂಬಂಧ ಬಿಎನ್ ಎಸ್ ಕಾಯ್ದೆಯ ಕಲಂ 307, 309(4) ಅಡಿ ಕೇಸ್ ದಾಖಲಿಸಲಾಗಿತ್ತು ಎಂದರು.
ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಅನಿಲ್ ಕುಮಾರ್ ಭೂಮಾರೆಡ್ಡಿ, 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಕಾರಿಯಪ್ಪ.ಎ.ಜಿ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಹೇಳಿದರು.
ಈ ವಿಶೇಷ ತಂಡದ ನೇತೃತ್ವವನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಎಸ್.ಎನ್ ಅವರು ವಹಿಸಿದ್ದರು. ಸಿಬ್ಬಂದಿಗಳಾದಂತ ಸಿಹೆಚ್ ಸಿ ಷೇಖ್ ಫೈರೋಜ್ ಅಹಮ್ಮದ್, ಹೆಚ್.ಸಿ ಸನಾವುಲ್ಲಾ, ಸಿಪಿಸಿ ರವಿಕುಮಾರ್, ಪಿಸಿ ಹನುಮಂತ ಜಂಬೂರ್, ನಂದೀಶ್, ಸಿಪಿಸಿ ಪ್ರವೀಣ್ ಕುಮಾರ್, ಜೀಪ್ ಚಾಲಕ ಎಹೆಚ್ ಸಿ ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿಗಳಾದಂತ ಗುರುರಾಜ, ಇಂದ್ರೇಶ್ ಮತ್ತು ವಿಜಯ್ ಕುಮಾರ್ ಒಡಗೂಡಿ ತನಿಖೆಗೆ ಇಳಿದಿದ್ದರು ಎಂದರು.
ಈ ತಂಡವು ಸಾಗರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾದಂತ 24 ಗಂಟೆಯಲ್ಲೇ ಆರೋಪಿತ ಜಾಡನ್ನು ಪತ್ತೆ ಹಚ್ಚಿ, ಪ್ರಕರಣದ ಆರೋಪಿಯಾದಂತ ಪವನ್ ಅನ್ನು ಬಂಧಿಸಲಾಗಿದೆ. ಈತ ಬೆಂಗಳೂರಿನ ಬಿಡದಿಯಲ್ಲಿರುವಂತ ಟೊಯೋಟಾ ಕಂಪನಿಯಲ್ಲಿ ಮಷಿನ್ ಆಪರೇಟರ್ ಕೆಲಸ ಮಾಡುತ್ತಿದ್ದನು. ದಿನಾಂಕ 17-11-2024ರಂದು ರಾಮನಗರದ ಬಿಡದಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಒಂದು ಚಾಕು, ಒಂದು ಕಪ್ಪು ಬಣ್ಣದ ಪರ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಮಹಿಳೆಯ ಕುತ್ತಿಗೆಯಿಂದ ಕಿತ್ತುಕೊಂಡು ಹೋಗಿದ್ದಂತ 39 ಗ್ರಾಂ 94 ಮಿಲಿ ತೂಕದ ರೂ.2,78,231 ಮೌಲ್ಯದ ಮಾಂಗಲ್ಯ ಸರವನ್ನು ರಾಮನಗರದ ಬಿಡದಿಯ ಮುತ್ತೂಟ್ ಮಿನಿ ಫೈನಾನ್ಸಿರ್ಯಸ್ ಲಿಮಿಟೆಡ್ ನಲ್ಲಿ ಇರಿಸಿದ್ದನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಆರೋಪಿ ಪವನ್ ಪತ್ತೆ ಹಾಗೂ ಕಿತ್ತುಕೊಂಡು ಹೋದ ಮಾಂಗಲ್ಯ ಸರವನ್ನು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದಂತ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ
ಮುರಿದೋದ ಡೆಸ್ಕ್, ಎಲ್ಲೆಲ್ಲೂ ಗಲೀಜ್, ಕರೆಂಟ್ ಶಾಕ್: ಇದು ‘ಸಾಗರದ ಪ್ರತಿಷ್ಠಿತ ಕಾಲೇಜಿನ ದುಸ್ಥಿತಿ’
BIG NEWS: ಹೇರ್ ಡ್ರೈಯರ್ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಲ್ಲಿದೆ ಘಟನೆಯ ಹಿಂದಿನ ಭಯಾನಕ ಸ್ಕೆಚ್